ಮಂಡ್ಯದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಉದ್ಘಾಟಿಸಿದರು.
- ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ
- ನಗರದಲ್ಲಿ ತರಬೇತಿ ಕಾರ್ಯಾಗಾರ
- ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಭಾಗಿ
ಮಂಡ್ಯ: ಹದಿನೆಂಟು ವರ್ಷದೊಳಗಿನ ಗಂಡು ಅಥವಾ ಹೆಣ್ಣು ತಪ್ಪು ಮಾಡಿದಾಗ ಬಾಲಪರಾಧಿಯಡಿ ಸಮಾನ ಶಿಕ್ಷೆ ಆಗಲಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಹೇಳಿದರು.
ನಗರದ ಸೆಂಟ್ ಜೋಸೆಫ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಸೆಂಟ್ ಜೋಸೆಫ್ ಶಿಕ್ಷಣ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಅಂಗವಾಗಿ ಆಯೋಜಿಸಿದ್ದ ಬಾಲ್ಯವಿವಾಹ ಫೋಕ್ಸೋ ಕಾಯ್ದೆ, ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ನ್ಯಾಯ ಕಾಯ್ದೆ 2015ರ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳಿಗೆ ತಪ್ಪು ಮಾಡಿದಾಗ ಅದನ್ನು ತಿದ್ದುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಆಗ ಆ ಮಕ್ಕಳು ಮುಂದೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಹಕಾರ ಮಾಡಿದಂತಾಗುತ್ತದೆ. ನಮ್ಮ ದೇಶ ಯುವಶಕ್ತಿ ಆಧಾರದ ಮೇಲೆ ನಿಂತಿದೆ. ಆದ್ದರಿಂದ ಯುವ ಶಕ್ತಿಯನ್ನು ತಯಾರು ಮಾಡುವ ಮಾದರಿ ಶಿಕ್ಷಕರಾಗಿ ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ರೋಹಿತ್ ಮಾತನಾಡಿ, ಮಕ್ಕಳು ತಪ್ಪು ಮಾಡಿದಾಗ ಬಾಲ ಅಪರಾಧಿ ಎನ್ನುವ ಪದ ಬಳಸದೆ ತಪ್ಪು ಮಾಡಿದವನು ಎಂದು ಕರೆಯಬೇಕು. ಹಾಗೆಯೇ ಅತ್ಯಾಚಾರ ಎಂಬ ಪದ ಬಳಸದೆ ಲೈಂಗಿಕ ಹಲ್ಲೆ ಎಂಬುವ ಪದ ಬಳಸಬೇಕು ಎಂದು ಮಾಹಿತಿ ನೀಡಿದರು.
ಸೆಂಟ್ ಜೋಸೆಫ್ ಕಾನ್ವೆಂಟ್‌ನ ವ್ಯವಸ್ಥಾಪಕಿ ಸಿಸ್ಟರ್ ವೀಣಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಶ್ಮಿ, ಪ್ರಾಂಶುಪಾಲ ಜಯಶಂಕರ್, ಉಪನ್ಯಾಸಕಿ ಮಮತಾ, ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ, ಕಾರ್ಯಕ್ರಮ ಸಂಯೋಜಕಿ ಸುಮಿತ್ರಾ ಇತರರಿದ್ದರು.