ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಮಾತನಾಡಿದರು.
- ನಗರದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
- ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜನೆ
ಮಂಡ್ಯ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸುರಕ್ಷಿತ ಬಾಲ್ಯವನ್ನು ಒದಗಿಸುವುದು ಸಮಾಜದ ಕರ್ತವ್ಯ. ಮಕ್ಕಳು ದೇಶದ ಭವಿಷ್ಯ. ಈ ಹಿನ್ನೆಲೆಯಲ್ಲಿ ಅವರಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಕೈಯಲ್ಲಿ ಪುಸ್ತಕವಿರಬೇಕು. ಅವರ ಕಣ್ಣಲ್ಲಿ ಕನಸುಗಳು ಇರಬೇಕು. ಹಾಗೂ ಭವಿಷ್ಯದ ಬಗ್ಗೆ ಯೋಚಿಸುವ ಮನಸ್ಸು ಇರಬೇಕು. ಬಹುಮುಖ್ಯವಾಗಿ ಮಕ್ಕಳ ಕಣ್ಣಲ್ಲಿ ಜೀವನದ ದುಃಖದ ಭಾರ ಇರಬಾರದು. ಮನೆಯ ತೊಂದರೆ, ಕೆಲಸದ ಸಲಕರಣೆಗಳು ಇರಬಾರದು. ಅದೇ ರೀತಿ ಬಾಲ ಕಾರ್ಮಿಕ ಪದ್ಧತಿಯನ್ನು ಎಲ್ಲರೂ ವಿರೋಧಿಸಬೇಕು ಎಂದು ಸಲಹೆ ನೀಡಿದರು.
ಇಂದಿಗೂ ವಿಶ್ವದಾದ್ಯಂತ ಮಕ್ಕಳು ಶಾಲೆಗೆ ಹೋಗುವ ಬದಲು ಕಾರ್ಖಾನೆ, ಹೋಟೇಲ್, ಮನೆ ಹಾಗೂ ಗಣಿ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿರಿ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಧರ್ಮ ಹಾಗೂ ಕರ್ತವ್ಯವಾಗಿದೆ ಎಂದು ಅವರು, ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂಬ ಉದ್ದೇಶದಿಂದ ಜೂ.12 ರಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆ ಹೋಗುವ ವಯಸ್ಸಿನಲ್ಲಿ ಮಕ್ಕಳ ಮಾನಸಿಕ, ದೈಹಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಹಾನಿಯಾಗುವಂತಹ ಕೆಲಸಗಳಿಗೆ ತೊಡಗಿಕೊಳ್ಳುವುದನ್ನು ಬಾಲ ಕಾರ್ಮಿಕತ್ವ ಎಂದು ಕರೆಯಲಾಗುವುದು. ಇದಕ್ಕೆ ಬಡತನ ಕಾರಣವಾಗಿದೆ. ಜತೆಗೆ ಪಾಲಕರಲ್ಲಿ ಶಿಕ್ಷಣದ ಕೊರತೆ, ಸಾಮಾಜಿಕ ಅಸಮಾನತೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಅರಿವಿನ ಕೊರತೆ ಸೇರಿದಂತೆ ಕೆಲವು ಕಾರಣಗಳಿಂದ ಬಾಲಕಾರ್ಮಿಕ ಪದ್ಧತಿ ಇರುವುದು ಮುಂದುವರೆಯುತ್ತಿರುವುದನ್ನು ಕಾಣಬಹುದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಶೋಷಣೆ ಉಂಟಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ ಭವಿಷ್ಯದಲ್ಲಿ ಉತ್ತಮ ಅವಕಾಶ ಕಳೆದುಕೊಳ್ಳುತ್ತಾರೆ. ಇದರಿಂದ ಕೊನೆಯದಾಗಿ ದೇಶದ ಮಾನವ ಸಂಪನ್ಮೂಲಕ್ಕೆ ದೊಡ್ಡ ಮಟ್ಟದ ಹಿನ್ನೆಡೆಯಾಗುತ್ತದೆ. ಆದರಿಂದ 14 ವರ್ಷ ಒಳಗಿನ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ, ಮಕ್ಕಳು ಇಡೀ ದೇಶದ ನಿಜವಾದ ಸಂಪತ್ತು ಮತ್ತು ಭವಿಷ್ಯದ ಅಡಿಪಾಯ. ದೇಶದ ಪ್ರಗತಿ ಮತ್ತು ಅಭಿವೃದ್ಧಿಯು ಮಕ್ಕಳ ಉತ್ತಮ ಶಿಕ್ಷಣ, ಆರೋಗ್ಯ ಅವಲಂಬಿಸಿರುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತಾ ಮಾತನಾಡಿ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಉದ್ದಿಮೆಗಳಲ್ಲಿ ಕೆಲಸ ಸೇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅಷ್ಟೆ ಅಲ್ಲದೇ, 14ರಿಂದ 18ರ ನಡುವಿನ ವಯೋಮಾನದ ಮಕ್ಕಳನ್ನು ಅಪಾಯಕಾರಿ ಕೆಲಸಕ್ಕೆ ಇರಿಸಿಕೊಳ್ಳುವುದೂ ಅಪರಾಧ. ಅಂತೆಯೇ ಗಣಿಗಾರಿಕೆ, ಸ್ಫೊಟಕ ಮತ್ತು ದಹ್ಯ ಪದಾರ್ಥಗಳು ಒಳಗೊಂಡಿರುವ ಯಾವುದೇ ರೀತಿಯ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸುವುದೂ ಶಿಕ್ಷಾರ್ಹ. ಈ ಹಿನ್ನೆಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗೋಡೆ ಬರಹ, ಆಟೋ ಪ್ರಚಾರ ಹಾಗೂ ಜಾಥಾಗಳ ಮೂಲಕ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಡಿಡಿಪಿಐ ಲೋಕೇಶ್, ಜಿಲ್ಲಾ ಕಾರ್ಮಿಕ ಯೋಜನಾ ನಿರ್ದೇಶಕ ಪ್ರಭಾಕರ್ ಸೇರಿದಂಥೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.