ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಗ್ರಾಮಸ್ಥರು ಚಿಕ್ಕಮ್ಮದೇವಿ ದೊಡ್ಡಮ್ಮದೇವಿ ಅವಳಿ ದೇವತೆಗಳ ಪೂಜಾ ಮಹೋತ್ಸವವನ್ನು ಸಂಭ್ರಮ ಸಡಗರದಿಂದ ನೆರವೇರಿಸಿದರು. 
ಮಂಡ್ಯ

ಪಾಲಹಳ್ಳಿಯಲ್ಲಿ ಚಿಕ್ಕಮ್ಮದೇವಿ-ದೊಡ್ಡಮ್ಮದೇವಿ ಮಹೋತ್ಸವ

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಚಿಕ್ಕಮ್ಮದೇವಿ ದೊಡ್ಡಮ್ಮದೇವಿ ಪೂಜಾ ಮಹೋತ್ಸವ ಸಂಭ್ರಮ-ಸಡಗರದಿಂದ ನೆರವೇರಿತು.
ಗ್ರಾಮ ಸಮೀಪದ ವಿರಿಜಾ ನಾಲೆಯಲ್ಲಿ ಮಂಗಳವಾರ ಮುಂಜಾನೆ ದೇವರ ಗುಡ್ಡಪ್ಪ ದಿನೇಶ್ ಹಾಗೂ ವಾರದ ದಾಸಪ್ಪ ನೇತೃತ್ವದಲ್ಲಿ ಅವಳಿ ದೇವಿಯರಿಗೆ ಮೀಸಲು ನೀರು ತೋರಿ ಹೋಮ-ಹವನ ಅರ್ಪಣೆಯೊಂದಿಗೆ ಉತ್ಸವಗಳನ್ನು ತಲೆ ಮೇಲೆ ಹೊತ್ತು ಮಡಿಬಟ್ಟೆ ಮೇಲೆ ನಡೆದು ಗ್ರಾಮದೊಳಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ಪಂಜಿನಸೇವೆ, ಕರ್ಪೂರದ ಸೇವೆ, ಈಡುಗಾಯಿ ಸೇವೆ ಅರ್ಪಣೆ ನಡೆದಿದ್ದು, ಹರಕೆ ಹೊತ್ತ ಕನ್ಯೆಯರು, ಮಹಿಳೆಯರು ಬಾಯಿ ಬೀಗ ಹಾಕಿಸಿಕೊಂಡು ಉತ್ಸವದೊಂದಿಗೆ ನಡೆದುಬಂದರು.
ಗ್ರಾಮದ ಗಾಂಧಿನಗರ, ಹಳ್ಳದಕೇರಿ, ಬ್ಯಾಂಕ್ ಬೀದಿ, ಮಾರಿಗುಡಿ ಬೀದಿ ಮೂಲಕ ಅಮ್ಮನ ಉತ್ಸವ ಕೂರಿಸುವ ರಾಮಮಂದಿರ ಬೀದಿಗೆ ದೇವರ ಉತ್ಸವವನ್ನು ಮಂಗಳವಾದ್ಯ, ತಮಟೆ-ನಗಾರಿಗಳ ಸದ್ದುಗಳೊಂದಿಗೆ ಸಾಗಿಬಂದು ಬಳಿಕ ದೇವಿ ದೇಗುಲದ ಜಗಲಿ ಮೇಲೆ ಉತ್ಸವಗಳನ್ನು ಪ್ರತಿಷ್ಠಾಪನೆಗೊಳಿಸಲಾಯಿತು.
ಗ್ರಾಮದ ಯಜಮಾನ ಶ್ರೀಧರ್, ಶ್ರೀ ಶಂಭುಲಿಂಗೇಶ್ವರಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ಪೈ.ಮುಕುಂದ, ಶ್ರೀನಿವಾಸ್, ಗ್ರಾಮದ ಹಿರಿಯ-ಕಿರಿಯ ಮುಖಂಡರು ಹಾಗೂ ಪೇಪರ್ ಬಸವರಾಜು ಉಪಸ್ಥಿತರಿದ್ದರು.