ಬೆಂಗಳೂರಿನ ಕರ್ನಾಟಕ ರಾಜ್ಯ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್‌ಗೆ ಪದಕ ನೀಡಿ ಗೌರವಿಸಿದರು. ಗೃಹಮಂತ್ರಿ ಜಿ.ಪರಮೇಶ್ವರ್, ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಇದ್ದರು. 
ಮಂಡ್ಯ

ಬಿ.ಜಿ.ಕುಮಾರ್‌ಗೆ ಮುಖ್ಯಮಂತ್ರಿ ಪದಕ

ಲೋಕೇಶ್ ಮನು. ಡಿ
ಶ್ರೀರಂಗಪಟ್ಟಣ: 2025ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶ್ರೀರಂಗಪಟ್ಟಣ ಟೌನ್ ಠಾಣೆಯ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರು ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರಿನ ಕೋರಮಂಗಲದ ಕರ್ನಾಟಕ ರಾಜ್ಯ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಸಾಧಕ ಅಧಿಕಾರಿ-ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಜಿ.ಕುಮಾರ್ ಅವರಿಗೆ ಪದಕ ನೀಡಿ ಅಭಿನಂದಿಸಿದರು.
ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರು ತಮ್ಮ ವೃತ್ತಿ ಸೇವೆಯಲ್ಲಿ 8 ಕೊಲೆ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಗೆ ಒಳಪಡಿಸುವಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಹಾಗೂ ಸಾಕ್ಷಿ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಜತೆಗೆ ಸಾಕಷ್ಟು ಕಳ್ಳತನ ಪ್ರಕರಣ ಭೇದಿಸಿ ಕಳವು ವಸ್ತುಗಳನ್ನು ಮರಳಿ ದೊರಕಿಸುವಲ್ಲೂ ಕಾರಣೀಕೃತರಾಗಿದ್ದರು. ಜತೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಅವಧಿಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರೊಂದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ದಂಪತಿ ಅಗ್ನಿಗಾಹುತಿ ಸಿಲುಕುವ ಸ್ಥಿತಿಗೆ ಒಳಗಾಗಿದ್ದ ವೇಳೆ ಪ್ರಾಣದ ಹಂಗು ತೊರೆದು ಕಾರಿನ ಗಾಜುಗಳ ಒಡೆದು ಅವರನ್ನು ರಕ್ಷಣೆ ಮಾಡಿ ಕರ್ತವ್ಯ ಮೆರೆದ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಸರ್ಕಾರ ಈ ಪದಕ ಪುರಸ್ಕಾರ ನೀಡಿ ಗೌರವಿಸಿದೆ. ಗೃಹಮಂತ್ರಿ ಜಿ.ಪರಮೇಶ್ವರ್, ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಇದ್ದರು.