ಉತ್ತಮ ಆರೋಗ್ಯ ಮತ್ತು ಜೀವನ ಕ್ರಮ’ ಕುರಿತು ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಕೆ.ಎನ್.ಶಿವನಂಜಪ್ಪ, ಕೆ.ಎಂ.ರೇಖಾ ಇತರರಿದ್ದರು.
- ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಆತಂಕ
ಕೆ.ಎಂ.ದೊಡ್ಡಿ: ರೈತರು ತಮ್ಮ ಕೃಷಿ ಭೂಮಿಗೆ ಅತಿಯಾದ ರಾಸಾನಿಕ ಗೊಬ್ಬರ ಬಳಸುತ್ತಿರುವುದರಿಂದ ಭೂಮಿ ಕ್ರಮೇಣವಾಗಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಸಮೀಪದ ಕ್ಯಾತಘಟ್ಟದ ಸರ್ಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ, ಮಂಡ್ಯದ ಪರಿಚಯ ಪ್ರಕಾಶನ, ಅಳಿಲು ಸೇವಾ ಬಳಗ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಸಹಾಯೋಗದೊಂದಿಗೆ ಆಯೋಜಿಸಲಾಗಿದ್ದ ’ಉತ್ತಮ ಆರೋಗ್ಯ ಮತ್ತು ಜೀವನ ಕ್ರಮ’ ಕುರಿತು ಜಾಗೃತಿ ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರೈತ ಸಮೂಹ ರಾಸಾಯನಿಕ ಬಳಕೆ ಹೆಚ್ಚು ಉಪಯೋಗಿಸುತ್ತಿರುವ ಪರಿಣಾಮ ನಿರೀಕ್ಷಿತ ಇಳುವರಿ ಪಡೆಯಲು ಅವರಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಜನಸಾಮಾನ್ಯರು ಸೇವಿಸುತ್ತಿರುವ ಆಹಾರ ಪದಾರ್ಥಗಳಲ್ಲಿ ಹಲವು ತರಹದ ರಾಸಾಯನಿಕ ಅಂಶಗಳು ಪತ್ತೆಯಾಗಿ ಜನತೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತರು ಹೈಬ್ರಿಡ್ ಮಾದರಿ ತಳಿಯ ಹಸುಗಳನ್ನು ಸಾಕಿ ಹೆಚ್ಚಿನ ಹಾಲನ್ನು ಉತ್ಪಾದಿಸುತ್ತಿದ್ದು, ಇದು ಕೂಡ ವಯಸ್ಕರು, ವಯೋವೃದ್ಧರ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ. ಆದ್ದರಿಂದ ನಮ್ಮ ದೇಸಿಯ ತಳಿಗಳಾದ ಹಳ್ಳಿಕಾರ್, ಮಲೆನಾಡು ಗಿಡ್ಡ ಸೇರಿದಂತೆ ಇತರೆ ದೇಸಿ ತಳಿಗಳನ್ನು ಸಾಕಲು ಮುಂದಾಗಬೇಕು. ನಮ್ಮ ಮಠದಿಂದಲೂ ಈ ಕುರಿತಾಗಿ ಹೆಚ್ಚಿನ ಅರಿವನ್ನು ಸಹ ಮೂಡಿಸುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
ಜನಸಾಮಾನ್ಯರು ಅತಿಯಾದ ಮೊಬೈಲ್ ಬಳಕೆ ಮಾಡುತ್ತಿರುವ ಪರಿಣಾಮವಾಗಿ ಅವರುಗಳಿಗೆ ಗೊತ್ತಿಲ್ಲದಂತೆ ಹಲವಾರು ಖಾಯಿಲೆಗಳು ವ್ಯಾಪಕವಾಗಿ ದೇಹ ಸೇರುತಿದ್ದು ಮಕ್ಕಳು, ವಿದ್ಯಾರ್ಥಿಗಳು, ಯುವಕರು, ವಯಸ್ಕರು, ವಯೋವೃದ್ಧರು ನಿತ್ಯವೂ ಮೋಬೈಲ್ ಅನ್ನು ಉಪಯೋಗಿಸುತ್ತಿದ್ದು, ಮುಖ್ಯವಾಗಿ ನೆನಪಿನ ಶಕ್ತಿ ಸೇರಿದಂತೆ ಬೇರೆ ಬೇರೆ ಅನಾರೋಗ್ಯಗಳನ್ನು ತಂದೋಡ್ಡುತ್ತಿದೆ ಎಂದರು.
ಭಾರತೀ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿ, ನೂರಾರು ಸಸಿಗಳನ್ನು ನೆಟ್ಟು ಪೋಷಿಸಿ ಮರಗಳನ್ನಾಗಿ ಮಾಡಿದ ಸಾಲು ಮರದ ತಿಮ್ಮಕ್ಕ ನಮಗೆ ಮಾದರಿಯಾಗಿ ದಂತೆಕತೆಯಾಗಿದ್ದು, ಹಿಂದೆ ಹಳ್ಳಿಗಳಲ್ಲಿ ಅತಿ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸುತ್ತಿದ್ದರು. ಆದರೆ ಇಂದು ಯಾವುದೇ ಮರಗಳನ್ನು ಬಿಡದೆ ಕಡಿಯುವ ಮನಸ್ಥಿತಿ ರೂಡಿಸಿಕೊಂಡಿರುವುದು ಶೋಚನೀಯ. ಮುಖ್ಯವಾಗಿ ಮಕ್ಕಳು, ಯುವಕರು ಅತಿ ಹೆಚ್ಚು ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಮಂಡ್ಯ ಜಿಲ್ಲೆಯ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಎಸ್.ಸತೀಶ್ ಜವರೇಗೌಡ ಮಾತನಾಡಿದರು.
ಬೆಂಗಳೂರಿನ ಶ್ರೀ ಪತಂಜಲಿ ಯೋಗಾಶ್ರಮ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ್ ಗುರೂಜಿ , ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಮನ್ ಪ್ರೀತ್ ಸಿಂಗ್, ಹಿರಿಯ ಪತ್ರಕರ್ತ ಸುಭಾಷ್ ಬಣಗಾರ್, ಉಪನ್ಯಾಸಕ ರವಿಕಿರಣ್ ಉಪನ್ಯಾಸ ನೀಡಿದರು.
ಮಂಡ್ಯದ ಪರಿಚಯ ಪುಸ್ತಕ ಪ್ರಕಾಶನವು ಸಾಹಿತ್ಯದ ವಿವಿಧ ಪ್ರಕಾರಕ್ಕೆ ಸೇರಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು.
ಕ್ಯಾತಘಟ್ಟ ಗ್ರಾ.ಪಂ ಅಧ್ಯಕ್ಷ ಕೆ.ಎನ್.ಶಿವನಂಜಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ಕೆ.ಎಂ.ರೇಖಾ, ಮುಖಂಡರಾದ ಕೆ.ಟಿ. ಜಯಪ್ರಕಾಶ್, ಬಿ. ಅಜಿತಕುಮಾರ್, ಬಿಎಂಟಿಸಿ ನೌಕರ ಗುರುದೇವರಹಳ್ಳಿ ಪುಟ್ಟಸ್ವಾಮಿ ಹಾಗೂ ಇತರರಿದ್ದರು.