ಪ್ರೇಕ್ಷಕರಿಗೆ ಮೆರುಗು ನೀಡಲಿವೆ ಜಾನಪದ ಕಲಾಮೇಳ
ಮೇಲುಕೋಟೆ: ಭಾರತೀಯ ಸಂಸ್ಕೃತಿಯ ಆಧಾರವಾದ ಜಾನಪದ ಕಲೆಗೆ ಮೇಲುಕೋಟೆಯ ರಥಸಪ್ತಮಿ ಬೃಹತ್ ವೇದಿಕೆಯಾಗುವ ಮೂಲಕ ಸನಾತನ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದೆ.
ಕರ್ನಾಟಕದ ದೇವಾಲಯಗಳಲ್ಲೇ ಜನಪದ ಕಲೆಗಾಗಿಯೇ ಮೀಸಲಾದ ಏಕೈಕ ಉತ್ಸವ ಚೆಲುವನಾರಾಯಣಸ್ವಾಮಿ ರಥಸಪ್ತಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜ.25ರಂದು ಮುಂಜಾನೆ 6 ಗಂಟೆಗೆ ನಡೆಯಲಿರುವ ಸೂರ್ಯಮಂಡಲ ವಾಹನೋತ್ಸವದಲ್ಲಿ ವಿಜೃಂಭಿಸುವ ಚೆಲುವನಾರಾಯಣಸ್ವಾಮಿಗೆ ಯತಿರಾಜದಾಸರ್ ಗುರುಪೀಠದ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿರುವ 27 ನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾ ಮೇಳದಲ್ಲಿ 60ಕ್ಕೂ ಹೆಚ್ಚು ಬಗೆಯ ಜನಪದ ಕಲಾ ತಂಡಗಳ 800ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿ ಕಲಾರಾಧನೆಯ ಸೇವೆ ಮಾಡುವುದು ಮೇಲುಕೋಟೆ ರಥಸಪ್ತಮಿಯ ವಿಶೇಷವಾಗಿದೆ. ಜನಪದ ಹಬ್ಬದ ಸಂಭ್ರಮಕ್ಕೆ ವಿವಿಧ ಶಾಲೆಗಳ ಮಕ್ಕಳೂ ಕಿಚ್ಚು ಹಚ್ಚಲಿದ್ದಾರೆ. ಮುಂಜಾನೆಯಿಂದ 9-30ರವರೆಗೆ ಇಡೀ ಉತ್ಸವ ಬೀದಿ ವೇದಿಕೆಯಾಗಿ ಜಾನಪದ ಲೋಕವೇ ಅನಾವರಣಗೊಳ್ಳಲಿದೆ.
ನಾಲ್ಕು ದಶಕಗಳ ಹಿಂದೆ ಒಂದೆರಡು ಕಲಾವಿದರು ಭಾಗವಹಿಸುತ್ತಿದ್ದ ರಥಸಪ್ತಮಿಗೆ ಪತ್ರಕರ್ತರು ಮತ್ತು ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕರಾಗಿದ್ದ ನಾಗರಾಜ ಅಯ್ಯಂಗಾರ್ ಹೆಚ್ಚು ಕಲಾವಿದರು ಭಾಗವಹಿಸುವಂತೆ ಮಾಡಿ ವ್ಯವಸ್ಥಿತವಾದ ವೇದಿಕೆ ಒದಗಿಸಿಕೊಟ್ಟರು. ಪರಿಣಾಮ ಭಾರತದ ಪ್ರಮುಖ ದೇವಾಲಯವಾದ ಚೆಲುವನ ರಥಸಪ್ತಮಿ ಜಾನಪದ ಕಲೆಗಳ ಪ್ರೋತ್ಸಾಹ ನೀಡುವ ಬೃಹತ್ ವೇದಿಕೆಯಾಗಿದೆ. ಅಯ್ಯಂಗಾರ್ ಇಲ್ಲದಿದ್ದರೂ ಅವರ ಆಶಯದಂತೆ ಜಾನಪದ ಕಲಾರಾಧನೆಯ ಸಾಂಸ್ಕೃತಿಕ ವೈಭವ ವರ್ಷದಿಂದ ವರ್ಷಕ್ಕೆ ಭಿನ್ನವಾಗಿ ನಿರಂತರವಾಗಿ ನಡೆಯುತ್ತಾ ಬಂದಿದೆ. ಮೇಲುಕೋಟೆಯಲ್ಲಿ ಮೂರು ದಶಕಗಳ ಕಾಲ ಯಾವುದೇ ಸಾಂಸ್ಕೃತಿಕ ಚಟುವಟಿಕೆ ನಿರಂತವಾಗಿ ನಡೆದ ಉದಾಹರಣೆಯಿಲ್ಲ. ಆದರೆ ರಥಸಪ್ತಮಿಯ ಜಾನಪದ ಕಲಾಮೇಳ ಕರೊನಾ ವೇಳೆಯಲ್ಲೂ ನಿಲ್ಲದೆ ನಿರಂತರವಾಗಿ ನಡೆಯುತ್ತಾ ಬಂದಿದೆ.
ಮಂಜಿನಂತೆ ಕರಗುವ ಸಂಕಷ್ಟ: ಸೂರ್ಯ ದೇವನಿಗೆ ಹಿಂದೂ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವಿದೆ. ಸೂರ್ಯನ ಪಥ ಬದಲಾವಣೆಯ ಹಿನ್ನೆಲೆಯಲ್ಲಿ ರಥಸಪ್ತಮಿ ಉತ್ಸವದ ಆಚರಣೆ ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ. ರಥಸಪ್ತಮಿಯಂದು ಸೂರ್ಯನಲ್ಲಿ ಶಿವಮತ್ತು ಮಹಾವಿಷ್ಣು ನೆಲೆಸಿ ಭಕ್ತರ ಇಷ್ಟಾರ್ಥವನ್ನು ನೆರವೇರಿಸುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಇಂತಹ ಪರ್ವಕಾಲದಂದು ಸೂರ್ಯದೇವನನ್ನು ಆರಾಧಿಸಿ ಅರುಣೋದಯದ ವೇಳೆ ಸೂರ್ಯಮಂಡಲ ವಾಹನದಲ್ಲಿ ವಿರಾಜಮಾನನಾದ ಶ್ರೀ ಚೆಲುವನಾರಾಯಣ ಸ್ವಾಮಿಯನ್ನು ದರ್ಶಿಸಿ ಉತ್ಸವದಲ್ಲಿ ಭಾಗಿಯಾದರೆ ಸಕಲ ಸಂಕಷ್ಟಗಳು ಮಂಜಿನಂತೆ ಕರಗಿ ದೂರವಾಗುತ್ತವೆ ಎಂದು ಪುರಾಣಗಳು ಉಲ್ಲೇಖಿಸುತ್ತವೆ.
ಮೇಲುಕೋಟೆ ರಥಸಪ್ತಮಿಯ ಜಾನಪದ ಕಲಾಮೇಳ ಭಾರತೀಯ ಸಂಸ್ಕೃತಿ ಬಿಂಬಿಸುವ ಅಭೂತಪೂರ್ವ ಜಾನಪದ ಕಲೆಗಳ ಸಂಗಮ. ಇಂತಹ ಕಾರ್ಯಕ್ರಮವನ್ನು ಹೆಚ್ಚು ಜನರು ವೀಕ್ಷಿಸಬೇಕು. ಜಾನಪದ ಕಲೆಗಳ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು. ಭಕ್ತರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.