Fraud by giving fake Rama Lakshmana coins
- ಹಣ ಪಡೆದು ನಕಲಿ ಕಾಯಿನ್ ನೀಡಿದ್ದ ವಂಚಕರು
ನಾಗಮಂಗಲ : ಮಾಂತ್ರಿಕ ರಾಮಲಕ್ಷ್ಮಣ ನಾಣ್ಯ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ನಕಲಿ ಕಾಯಿನ್ ಕೊಟ್ಟು ಪರಾರಿಯಾಗುತ್ತಿದ್ದ ವಂಚಕರಿಬ್ಬರನ್ನು ಹಿಡಿದ ಸಾರ್ವಜನಿಕರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್‌ರಾವ್ ಮತ್ತು ಸುಧೀರ್ ಧರ್ಮದೇಟು ತಿಂದು ಪೊಲೀಸರ ಅತಿಥಿಗಳಾಗಿರುವ ಚಾಲಾಕಿ ವಂಚಕರು. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಶ್ರೀಕಂಠೇಶ್ವರನಗರ ವಾಸಿ ಲೇಟ್ ಎಂ.ಎನ್.ಮೂರ್ತಿ ಅವರ ಪುತ್ರ ಎಂ.ಎನ್.ಜಯಸಿಂಹ ಅವರೇ ಮಾಂತ್ರಿಕ ರಾಮಲಕ್ಷ್ಮಣ ಕಾಯಿನ್‌ಗೆ ಆಸೆಪಟ್ಟು ಹಣ ಕಳೆದುಕೊಂಡವರು.
ವೃತ್ತಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಎಂ.ಎನ್.ಜಯಸಿಂಹ ಅವರು ಕೆಲ ದಿನಗಳ ಹಿಂದೆ ಬೆಂಗಳೂರಿನ ಮೆಜೆಸ್ಟಿಕ್ ಬಳಿ ನಿಂತಿದ್ದ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ಬಂದು ಮಾಂತ್ರಿಕ ರಾಮಲಕ್ಷ್ಮಣ ಕಾಯಿನ್ ಬಗ್ಗೆ ತಿಳಿಸಿ ಆ ಕಾಯಿನ್ ತೆಗೆದುಕೊಂಡಲ್ಲಿ ನಿಮಗೆ ಅದೃಷ್ಟ ಖುಲಾಯಿಸಿ ನಿಮ್ಮ ಕಷ್ಟಗಳೆಲ್ಲವೂ ಪರಿಹಾರವಾಗುತ್ತವೆ. ನಾನೂ ಕೂಡ ಮಾಂತ್ರಿಕ ರಾಮಲಕ್ಷ್ಮಣ ಕಾಯಿನ್ ತೆಗೆದುಕೊಂಡ ನಂತರ ನನಗೆ ಒಳ್ಳೆಯದಾಗಿದೆ, ನಿಮಗೆ ಆ ಕಾಯಿನ್ ಬೇಕಾದರೆ 861894787ಗೆ ಕರೆ ಮಾಡಿ ಎಂದು ಹೇಳಿದ್ದಾನೆ. ಇದನ್ನು ನಂಬಿದ ಎಂ.ಎನ್.ಜಯಸಿಂಹ ಅವರು ಕಳೆದ ಡಿ.6ರಂದು ಮೊ. ಕರೆ ಮಾಡಿದಾಗ ಯಶ್ವಂತ್‌ರಾವ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಮಾಂತ್ರಿಕ ರಾಮಲಕ್ಷ್ಮಣ ಕಾಯಿನ್ ನಮ್ಮಲ್ಲಿ ಸಿಗುತ್ತದೆ. ಅದಕ್ಕೆ 1.60 ಲಕ್ಷ ರೂ.ಗಳಾಗುತ್ತದೆ ಎಂದಿದ್ದಾನೆ. ನಂತರ ಚೌಕಾಸಿ ಮಾಡಿ 1.25 ಲಕ್ಷ ರೂ.ಗೆ ಪರಸ್ಪರ ಮಾತುಕತೆ ಮಾಡಿಕೊಂಡಿದ್ದಾರೆ. ಅಂದಿನಿಂದ ಪ್ರತಿನಿತ್ಯ ಇಬ್ಬರೂ ಕೂಡ ಮೊಬೈಲ್ ಮೂಲಕ ಮಾಂತ್ರಿಕ ರಾಮಲಕ್ಷ್ಮಣ ಕಾಯಿನ್ ಬಗ್ಗೆ ಮಾತಾಡಿಕೊಂಡಿದ್ದಾರೆ.
ಡಿ.17ರ ಬುಧವಾರ 1.10 ಲಕ್ಷ ರೂ.ಗಳನ್ನು ಹೊಂದಿಸಿಕೊಂಡ ಎಂ.ಎನ್.ಜಯಸಿಂಹ ರಾತ್ರಿ ಯಶ್ವಂತ್‌ರಾವ್‌ಗೆ ಕರೆ ಮಾಡಿದಾಗ ಹಣ ತೆಗೆದುಕೊಂಡು ನಾಗಮಂಗಲಕ್ಕೆ ಬನ್ನಿ ಕಾಯಿನ್ ನೀಡುತ್ತೇವೆ ಎಂದು ಹೇಳಿದ್ದಾನೆ. ಅದರಂತೆ ಬುಧವಾರ ರಾತ್ರಿಯೇ ಬೆಂಗಳೂರಿನಿಂದ ಹೊರಟು ಬರುತ್ತಿರುವುದಾಗಿ ತಿಳಿಸಿದ್ದಾರೆ. ತಾಲೂಕಿನ ಶಿಕಾರಿಪುರ ಗ್ರಾಮಕ್ಕೆ ಬರುವಂತೆ ಯಶ್ವಂತ್‌ರಾವ್ ಹೇಳಿದ್ದನು. ಅದರಂತೆ ಗುರುವಾರ ಬೆಳಗ್ಗೆ 7.30ರ ವೇಳೆಗೆ ಶಿಕಾರಿಪುರ ಗ್ರಾಮಕ್ಕೆ ಬಂದಿಳಿದ ಜಯಸಿಂಹ ಯಶ್ವಂತ್‌ರಾವ್‌ಗೆ ಕರೆ ಮಾಡಿದಾಗ ನಾಗಮಂಗಲ ಟೌನ್‌ಗೆ ಹೋಗಿರಿ ಅಲ್ಲಿಗೇ ಕಾಯಿನ್ ತಂದುಕೊಡುವುದಾಗಿ ಯಶ್ವಂತ್‌ರಾವ್ ಹೇಳಿದ್ದಾನೆ. ಬಳಿಕ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿದ್ದ ಜಯಸಿಂಹ ಅವರಿಗೆ ಕರೆ ಮಾಡಿಕೊಂಡು ನಾಲ್ವರ ಜತೆಯಲ್ಲಿ ಬಂದ ನಾನೇ ಯಶ್ವಂತ್‌ರಾವ್ ನನ್ನ ನಿಜವಾದ ಹೆಸರು ಏಸಣ್ಣ ಮೊಬೈಲ್‌ನಲ್ಲಿ ಯಾರಿಗೂ ನನ್ನ ನಿಜ ಹೆಸರು ಹೇಳುವುದಿಲ್ಲ ಎಂದು ಹೇಳಿ ಜತೆಯಲ್ಲಿ ಕರೆತಂದಿದ್ದವರನ್ನು ಸುಧೀರ್, ಸತ್ಯ ಹಾಗೂ ಪಡಿಯಪ್ಪ ಎಂದು ಪರಿಚಯಿಸಿದ್ದಾನೆ. ನಂತರ ಯಶ್ವಂತ್‌ರಾವ್ ಅಲಿಯಾಸ್ ಏಸಣ್ಣ ಜಯಸಿಂಹ ಅವರ ಕೈಗೆ ರಾಮಲಕ್ಷ್ಮಣ ಕಾಯಿನ್ ತೋರಿಸಿ ಹಣ ಕೊಡಿ ಎಂದು ಕೇಳಿದ್ದಾನೆ. ಅದಕ್ಕೆ ಗೂಗಲ್‌ಪೇ ಮಾಡುವುದಾಗಿ ಜಯಸಿಂಹ ಹೇಳಿದಾಗ 7619639698 ನಂಬರ್ ಕೊಟ್ಟು ಇದಕ್ಕೆ ಹಣ ಹಾಕಿ ಎಂದಿದ್ದಾನೆ. ಅದರಂತೆ ಜಯಸಿಂಹ ತಮ್ಮ ಮೊಬೈಲ್‌ನಿಂದ ಗೂಗಲ್‌ಪೇ ಖಾತೆಯಿಂದ 49 ಸಾವಿರ ರೂ.ನಂತೆ ಎರಡು ಬಾರಿ ಹಣ ವರ್ಗಾವಣೆ ಮಾಡಿದ ತಕ್ಷಣ ರಾಮಲಕ್ಷ್ಮಣ ಕಾಯಿನ್ ಕೊಟ್ಟಿದ್ದಾರೆ. ಇದನ್ನು ನೋಡಿದ ಜಯಸಿಂಹ ಇದು ನಕಲಿ ಕಾಯಿನ್‌ನಂತೆ ಕಾಣುತ್ತಿದೆ. ಇದು ನನಗೆ ಬೇಡ ನನ್ನ ಹಣ ವಾಪಸ್ ಕೊಡಿ ಎನ್ನುತ್ತಿದ್ದಂತೆ ನಾಲ್ವರು ವಂಚಕರು ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ಕಳ್ಳರು ಕಳ್ಳರು ಹಿಡಿಯಿರಿ ಎಂದು ಜಯಸಿಂಹ ಕೂಗಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಓಡಿ ಹೋಗುತ್ತಿದ್ದ ನಾಲ್ವರ ಪೈಕಿ ಯಶ್ವಂತ್‌ರಾವ್ ಅಲಿಯಾಸ್ ಏಸಣ್ಣ ಮತ್ತು ಸುಧೀರ್ ಎಂಬ ಇಬ್ಬರನ್ನು ಹಿಡಿದು ಧರ್ಮದೇಟು ನೀಡಿದ ನಂತರ ಪೊಲೀಸರಿಗೆ ಕರೆ ಮಾಡಿದರು. ಪಟ್ಟಣದ ಠಾಣೆಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಜಯಸಿಂಹ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.