ಭಾರತೀನಗರದ ಭಾರತೀ ಕಾಲೇಜ್ ಗೇಟ್ ಬಳಿ ಭಾರತ್ ವಿಕಾಸ್ ಪರಿಷತ್ ವತಿಯಿಂದ ರಾಮನವಮಿ ಆಚರಣೆ ಮಾಡಲಾಯಿತು. 
ಮಂಡ್ಯ

ಕೆ.ಎಂ.ದೊಡ್ಡಿಯಲ್ಲಿ ಶ್ರೀರಾಮನ ಜಪ

ಕೆ.ಎಂ.ದೊಡ್ಡಿ ಕೆ.ಎಂ.ದೊಡ್ಡಿಯ ವಿವಿಧೆಡೆ ಶುಕ್ರವಾರ ಶ್ರೀರಾಮನವಮಿ ಆಚರಣೆ ವಿಜೃಂಭಣೆಯಿಂದ ನಡೆಯಿತು.
ಭಾರತೀ ಕಾಲೇಜ್ ಗೇಟ್ ಸಮೀಪ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಭಾರತ್‌ವಿಕಾಸ್ ಪರಿಷತ್ ವತಿಯಿಂದ ರಾಮನವಮಿ ಆಚರಿಸಲಾಯಿತು. ರಾಮನ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಕಾರ್ಯಕ್ರಮಕ್ಕೆ ಭಾರತ್ ವಿಕಾಸ್ ಪರಿಷತ್ ಪೋಷಕ ಅಧ್ಯಕ್ಷ ಎಂ.ಮಾಯಪ್ಪ ಚಾಲನೆ ನೀಡಿದರು. ಹಲವು ವರ್ಷಗಳಿಂದ ಗ್ರಾಮದಲ್ಲಿ ರಾಮನವಮಿ ಆಚರಿಸಲಾಗುತ್ತಿದೆ. ಇತ್ತೀಚಿನ ತಲೆಮಾರಿನ ಜನರುಗಳಲ್ಲಿ ಧಾರ್ಮಿಕ ಶ್ರದ್ಧೆ, ದೇವರ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನತೆ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ದಿನಗಳನ್ನು ಆಚರಿಸುವ ಮೂಲಕ ಮುಂದಿನ ತಲೆಮಾರಿನ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಬೆಳೆಸಬೇಕು. ರಾಮನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿಯುವುದರ ಜತೆಗೆ ಆರಾಧಿಸಬೇಕು. ರಾಮ ಆದರ್ಶ ಪುರುಷ, ಶಾಂತಿಧೂತ, ತಂದೆಯ ಮಾತನ್ನು ನಡೆಸಿಕೊಟ್ಟಂತ ಮಹಾನ್ ವ್ಯಕ್ತಿ. ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ, ನೇರ ವ್ಯಕ್ತಿತ್ವವುಳ್ಳ ದೇವರು ಎಂದು ಬಣ್ಣಿಸಿದರು.
ಜಿ.ಪಂ. ಮಾಜಿ ಸದಸ್ಯ ಎ.ಎಸ್. ರಾಜೀವ್, ಸ್ನೇಹ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಿ.ದಾಸೇಗೌಡ, ಭಾರತ್‌ವಿಕಾಸ್ ಪರಿಷತ್ ಪೋಷಕ ಅಧ್ಯಕ್ಷ ಎಂ.ಮಾಯಪ್ಪ, ಅಧ್ಯಕ್ಷ ಶಿವಮಾದೇಗೌಡ, ಕಾರ್ಯದರ್ಶಿ ಶಿವರಾಮು, ಗಾಯತ್ರಿ, ಕವಿತಾ ವೈಬಿಶ್ರೀ, ಎ.ಬಿ.ಹಳ್ಳಿ ರಮೇಶ್, ಎಂ.ಜೆ.ರಾಮಯ್ಯ, ಕೆ. ಶೆಟ್ಟಹಳ್ಳಿ ಬೋರಯ್ಯ, ನಂಜುಂಡೇಗೌಡ, ಜಿ.ಕೃಷ್ಣ ಸಿಮೆಂಟ್ ಸಿದ್ದೇಗೌಡ ಸೇರಿದಂತೆ ಹಲವರಿದ್ದರು.
ಸಮೀಪದ ಕುರಿಕೆಂಪನದೊಡ್ಡಿಯಲ್ಲಿ ರಾಮನವಮಿ ಅಂಗವಾಗಿ ರಾಮಮಂದಿರದಲ್ಲಿ ವಿಶೇಷ ಪೂಜಾ ಕೈಕಂರ್ಯಗಳನ್ನು ನೆರವೇರಿಸಿ ಪಾನಕ ಮಜ್ಜಿಗೆ ವಿತರಿಸಲಾಯಿತು. ಈ ವೇಳೆ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿಯ ಸದಸ್ಯ ಕೆ.ಎಸ್.ಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಕೆ.ಎಲ್.ಅರ್ಕೆಶ್, ಯೋಗೇಶ್, ಗುಂಡ ನಂದೀಶ್, ಕೆ.ಎಸ್.ನಾರಾಯಣ, ವಿಷಕಂಠೇಗೌಡ, ಶಿವಾನಂದ್, ಸೇರಿದಂತೆ ಮತ್ತಿತರಿದ್ದರು.