ಶ್ರೀರಂಗಪಟ್ಟಣ ಪಟ್ಟಣದ ಗೋಸೇಗೌಡರ ಬೀದಿಯ ಜಟ್ಟಪ್ಪನ ಗರಡಿ ಮನೆಯಲ್ಲಿನ ಶ್ರೀ ಚಾಮುಂಡೇಶ್ವರಿ ದೇವಿಯ 13ನೇ ವರ್ಷದ ಪೂಜಾ ಕಾರ್ಯದಲ್ಲಿ ಮಹಿಳೆಯರು ತಮ್ಮ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಆಗಮಿಸಿ ಶಕ್ತಿದೇವಿಗೆ ಹಣ್ಣು-ಕಾಯಿ, ತಂಬಿಟ್ಟಿನಾರತಿಯೊಂದಿಗೆ ದೀಪ-ಧೂಪ ಬೆಳಗಿ ಒಳಿತಿಗಾಗಿ ಪ್ರಾರ್ಥಿಸಿದರು. 
ಮಂಡ್ಯ

ಚಾಮುಂಡೇಶ್ವರಿ ಪೂಜಾ ಮಹೋತ್ಸವ

ಅಭಿನಯ್ ಎಚ್.ಎಂ
ಶ್ರೀರಂಗಪಟ್ಟಣ: ಪಟ್ಟಣದಲ್ಲಿ 13ನೇ ವರ್ಷದ ಶ್ರೀ ಚಾಮುಂಡೇಶ್ವರಿ ದೇವಿಯ ಪೂಜಾ ಮಹೋತ್ಸವವನ್ನು ಶುಕ್ರವಾರ ಪುರಜನರು ವಿಜೃಂಭಣೆಯಿಂದ ನೆರವೇರಿಸಿದರು.
ಪಟ್ಟಣದ ಗೋಸೇಗೌಡರ ಬೀದಿಯ ಜಟ್ಟಪ್ಪನ ಗರಡಿ ಮನೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಒಕ್ಕಲಿಗ ಕುಲಸ್ಥರು ಅಗ್ರಪೂಜೆ ಹಮ್ಮಿಕೊಂಡಿದ್ದು, ವಿವಿಧ ಬಗೆಯ ವಿಶೇಷ ಹೂವುಗಳು ಸೇರಿದಂತೆ ವಸ್ತ್ರ, ಒಡವೆಗಳಿಂದ ವೈಭವೋಪೇರಿತವಾಗಿ ಅಲಂಕರಿಸಿ ವಿವಿಧ ಪೂಜಾ ಕಾರ್ಯಗಳನ್ನು ಅರ್ಪಿಸಿ ಮಹಾಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೈಭವದ ಪೂಜಾ ಕಾರ್ಯದಲ್ಲಿ ಪುರಜನರೆಲ್ಲರೂ ಯಾವುದೇ ಭೇದ ಭಾವವಿಲ್ಲದೆ ಹಣ್ಣು-ಕಾಯಿ, ತಂಬಿಟ್ಟಿನಾರತಿಯೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ದೀಪ ಧೂಪ ಬೆಳಗಿ ಭಕ್ತಿಯಿಂದ ಶಕ್ತಿದೇವಿಯನ್ನು ಆರಾಧಿಸಿ ತಮ್ಮ ಕಟುಂಬ ಸೇರಿದಂತೆ ಪಟ್ಟಣದ ಒಳಿತಿಗಾಗಿ ಪ್ರಾರ್ಥಿಸಿದರು. ಬಳಿಕ ಸರತಿ ಸಾಲಿನಲ್ಲಿ ನಿಂತ ಜನರು ತೀರ್ಥ ಪ್ರಸಾದ ಸ್ವೀಕರಿಸಿದರು. ]
ಬಳಿಕ ಮಧ್ಯಾಹ್ನ ವೇಳೆಗೆ ದೇವಿಯ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಹಾಗೂ ಸಾರ್ವಜನಿಕರಿಗಾಗಿ ಭೂರಿ ಭೋಜನ ಪ್ರಸಾದ ವಿತರಣೆಯ ವ್ಯವ್ಯಸ್ಥೆ ಕೈಗೊಂಡಿದ್ದು, ಸಾಲು ಪಂಕ್ತಿಯಲ್ಲಿ ಸಮನಾಗಿ ಕುಳಿತ ಸಹಸ್ರಾರು ಜನರು ಭರ್ಜರಿ ಬಾಡೂಟ ಸವಿದರು. ಒಕ್ಕಲಿಗ ಕುಲಸ್ಥರು, ಯಜಮಾನರು ಸೇರಿದಂತೆ ಪಟ್ಟಣದ ಪ್ರಮುಖರೆಲ್ಲರೂ ದೇವಿಯ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.