ಮಂಡ್ಯ ತಾಲೂಕು ಸೂನಗನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು.
- ಸರ್ಕಾರಿ ಶಾಲೆಗಳಿಗೆ ದಿಢೀರ್ ಭೇಟಿ
- ಪೂರ್ವಸಿದ್ಧತೆಗಳ ಪರಿಶೀಲನೆ
- ಡಿಡಿಪಿಐಗೆ ಜಿಪಂ ಸಿಇಒ ಹಲವು ಸೂಚನೆ
ಮಂಡ್ಯ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಪರಿಶೀಲನೆ ನಡೆಸಿದರು.
ತಾಲೂಕಿನ ಸೂನಗನಹಳ್ಳಿ ಮತ್ತು ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಅಂತೆಯೇ ಮೊದಲನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣಗಳೇನು ಎಂಬ ಬಗ್ಗೆ ಶಾಲೆಯ ಮುಖ್ಯೋಪಧ್ಯಾಯರಿಂದ ಮಾಹಿತಿ ಪಡೆದರು.
ಕಲಿಕಾ ಮಿತ್ರ ಪರೀಕ್ಷಾ ಮಾರ್ಗದರ್ಶಿ ನೀಡಿದ ನಂತರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸ್ವಲ್ಪ ಅನುಕೂಲವಾಗಿದೆ ಹಾಗೂ ಸಿಎಸ್‌ಆರ್ ಅನುದಾನದಡಿ ನೀಡಲಾಗಿರುವ ನೋಟ್‌ಬುಕ್‌ಗಳನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಹೆಚ್ಚಿನ ಅಬ್ಯಾಸ ಮಾಡಿಸಲು ಸಹಾಯಕವಾಗಿದೆ ಎಂದು ಶಿಕ್ಷಕರು ಮಾಹಿತಿ ನೀಡಿದರು.
ಕಳೆದ ಮಾಹೆಯಿಂದ ಭಾನುವಾರವೂ ಸಹ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಹಾಜರಾಗುತ್ತಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿದ್ದು, ವಿದ್ಯಾರ್ಥಿಗಳ ಪಾಲಕರಿಗೂ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕೆಲವು ಬಾಲಕರು ಶಾಲೆಗೆ ಗೈರು ಹಾಜರಾಗುತ್ತಿದ್ದು, ಬಾಲಕರಿಂದಲೇ ಫಲಿತಾಂಶ ಕುಂಠಿತವಾಗುತ್ತಿದೆ ಎಂದರು.
ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಮುಖ್ಯ ಪರೀಕ್ಷೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪಾಲಕರಿಗೂ ಸಹ ಸೂಕ್ತ ಮಾಹಿತಿ ನೀಡಿ ಮಕ್ಕಳಿಗೆ ಮನೆಯಲ್ಲಿಯೂ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಬಾಲಕರ ಪಾಲಕರ ಸಭೆ ನಡೆಸಿ ಶಿಕ್ಷಣದ ಮಹತ್ವ, ಅದರಲ್ಲಿಯೂ ಎಸ್‌ಎಸ್‌ಎಲ್ಸಿ ಉತ್ತೀರ್ಣರಾಗುವುದರಿಂದ ಆಗುವ ಪ್ರಯೋಜನಗಳ ಕುರಿತು ಮನವರಿಕೆ ಮಾಡಿಕೊಡುವಂತೆ ಕ್ರಮ ವಹಿಸಲು ಸೂಚಿಸಿದರು.
ಶಾಲಾ ಆವರಣದಲ್ಲಿ ಸಂಜೆಯಾಗುತ್ತಿದ್ದಂತೆ ಗ್ರಾಮದ ಕೆಲವು ಯುವಕರು ಆಟ ಆಡಲು ಬರುವ ಕಾರಣ ಸಂಜೆಯ ನಂತರ ವಿಶೇಷ ತರಗತಿ ನಡೆಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಗ್ರಾ.ಪಂ.ಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಪಿಡಿಒಗೆ ಸೂಚಿಸಿದ ಸಿಇಒ, ಜಿಲ್ಲೆಯ ಎಲ್ಲ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿಯೂ ವಿಶೇಷ ತರಗತಿ ನಡೆಸುವಂತೆ ಹಾಗೂ ಆ ದಿನಗಳಂದು ಸಾರ್ವಜನಿಕರು ಶಾಲಾ ಆವರಣಕ್ಕೆ ಪ್ರವೇಶಿಸಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ನೀಡಿ ಆದೇಶ ಹೊರಡಿಸುವಂತೆ ಡಿಡಿಪಿಐಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಸೂನಗಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ವೀಣಾ, ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಪ್ರತಿಭಾ ಇತರರಿದ್ದರು.
ಗ್ರಾ.ಪಂ.ಗೆ ಭೇಟಿ: ಶಾಲೆಗೆ ಭೇಟಿ ನೀಡುವ ಮಾರ್ಗ ಮಧ್ಯೆ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಸಾರ್ವಜನಿಕರು ಜಮಾವಣೆಗೊಂಡಿದ್ದನ್ನು ಗಮನಿಸಿದ ಸಿಇಒ, ಅಲ್ಲಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು 15ನೇ ಹಣಕಾಸು ಯೋಜನೆಯಡಿ 40 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತವನ್ನು ಅಕ್ರಮವಾಗಿ ಪಾವತಿ ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದರು. ಸ್ಥಳದಲ್ಲಿಯೇ ಮಂಡ್ಯ ತಾ.ಪಂ ಇಒ ಲೋಕೇಶ್‌ಮೂರ್ತಿಗೆ ಕರೆ ಮಾಡಿ ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಹಾಗೂ ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಿಇಒ ತಿಳಿಸಿದರು.