ಮದ್ದೂರು ರೈಲ್ವೆ ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಿ.ಸಿ.ತಮ್ಮಣ್ಣ ಇದ್ದರು.
ಮದ್ದೂರು: ಮದ್ದೂರು ಜನತೆಯ ಹಲವು ದಶಕಗಳ ಬೇಡಿಕೆಯಾದ ನೂತನ ರೈಲು ನಿಲ್ದಾಣಕ್ಕೆ ಕೆಲ ದಿನಗಳಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಬೆಂಗಳೂರಿನಿಂದ-ಮೈಸೂರಿನವರೆಗೆ ರೈಲ್ವೆ ಕಾಮಗಾರಿಗಳ ವೀಕ್ಷಣೆ ನಡೆಸಿದ ಅವರು ಗುರುವಾರ ಮದ್ದೂರು ರೈಲು ನಿಲ್ದಾಣಕ್ಕೆ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ವಿಶೇಷ ರೈಲಿನಲ್ಲಿ ಆಗಮಿಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ನಗರದ ಸಾರಿಗೆ ನಿಲ್ದಾಣ ಸಮೀಪ ಹೊಸದಾಗಿ ರೈಲು ನಿಲ್ದಾಣವನ್ನು ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಮನವಿ ನೀಡಿದ್ದೀರಿ. ಕೂಡಲೇ ಕಾರ್ಯಗತವಾಗುವ ನಿಟ್ಟಿನಲ್ಲಿ ಗಮನಹರಿಸಲಾಗುವುದು ಎಂದು ಹೇಳಿದರು.
ಈ ಬಗ್ಗೆ ಇನ್ನೊಂದು ವಾರದಲ್ಲಿ ರೈಲ್ವೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಡ ಮೇರೆಗೆ ಮಂಡ್ಯ ಜಿಲ್ಲೆಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮಾಡುವುದರ ಬಗ್ಗೆ ಈಗಾಗಲೇ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ಮುಂದಿನ 6 ತಿಂಗಳೊಳಗೆ ಈ ರೈಲ್ವೆ ನಿಲ್ದಾಣಗಳ ಆಧುನಿಕರಣ ಕಾಮಗಾರಿ ಪೂರ್ಣಗಳಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಆಗಮಿಸಿ ಉದ್ಘಾಟನೆ ಮಾಡಲಾಗುವುದು ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬೆಂಗಳೂರು ನಗರ, ರಾಮನಗರ, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರುವರೆಗೆ ಸಾಗುವ ಅತ್ಯಂತ ಮಹತ್ವದ ಈ ರೈಲು ಮಾರ್ಗದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಇನ್ನೂ ಆಗಬೇಕಿರುವ ಅಂಡರ್ ಪಾಸ್ ಅಥವಾ ಫ್ಲೈ ಓವರ್‌ನಂತಹ ಜನೋಪಯೋಗಿ ಕೆಲಸಗಳ ಬಗ್ಗೆ ಜನರಿಂದ ಹಾಗೂ ಜನಪ್ರತಿನಿಧಿಗಳಿಂದ ಮಾಹಿತಿ ಪಡೆಯಲು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಜತೆಗೆ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರೈಲು ಮಾರ್ಗವನ್ನು ವೀಕ್ಷಣೆ ನಡೆಸಿ ಕಾಮಗಾರಿ ವರದಿ ತಯಾರು ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಶಿವಪುರ ಆಶ್ರಯ ಬಡಾವಣೆಗೆ ಸಂಪರ್ಕ ಕಲ್ಪಿಸಲು ಅಂಡರ್ ಪಾಸ್, ಚನ್ನೇಗೌಡನ ದೊಡ್ಡಿಯಲ್ಲಿ ಅಂಡರ್ ಪಾಸ್ ಅಥವಾ ಫ್ಲೈ ಓವರ್ ನಿರ್ಮಾಣ ಮಾಡಲು ಮನವಿ ಮಾಡಿದರು. 3 ರೈಲು ನಿಲುಗಡೆಗೆ ಸೇರಿದಂತೆ ಹಲವು ಮನವಿಗಳನ್ನು ವಿ.ಸೋಮಣ್ಣ ಅವರಿಗೆ ಸಲ್ಲಿಸಲಾಯಿತು. ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್ ಹಾಜರಿದ್ದರು.
ವಿಜಯವಾಣಿ ಪತ್ರಿಕೆ ಡಿ.17 ರಂದು ಮೇಲ್ಸೇತುವೆಗಳಿಲ್ಲದೆ ಜನರ ಪರದಾಟ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಮಾಡಿ ಗಮನ ಸೆಳೆದಿತ್ತು.