ಮಂಡ್ಯದಲ್ಲಿ ಆಯೋಜಿಸಿದ್ದ ಜನಗಣತಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.  
ಮಂಡ್ಯ

ಏ.16ರಿಂದ ಜಿಲ್ಲೆಯಲ್ಲಿ ಡಿಜಿಟಲ್ ಜನಗಣತಿ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಎರಡು ಹಂತದಲ್ಲಿ ನಡೆಯಲಿರುವ ಗಣತಿ
  • ನಗರದಲ್ಲಿ ಪೂರ್ವಭಾವಿ ಸಭೆ
ಮಂಡ್ಯ: ಜಿಲ್ಲೆಯಲ್ಲಿ 2027ರ ಡಿಜಿಟಲ್ ಜನಗಣತಿ ಎರಡು ಹಂತದಲ್ಲಿ ನಡೆಯಲಿದೆ. ಅದರಂತೆ ಮೊದಲ ಹಂತದ ಮನೆಗಳ ಪಟ್ಟಿ ಮಾಡುವ ಪ್ರಕ್ರಿಯೆ ಏ.16ರಿಂದ ಸೆ.15ರವರೆಗೆ ಹಾಗೂ ಜನಸಂಖ್ಯೆ ಎಣಿಕೆ ಮುಂದಿನ ವರ್ಷ ಫೆಬ್ರವರಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಮುಖ್ಯ ಜನಗಣತಿ ಅಧಿಕಾರಿಯಾಗಿ ಜವಾಬ್ದಾರಿ ವಹಿಸಲಿದ್ದಾರೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಡೆಯಲಿರುವ ಡಿಜಿಟಲ್ ಮನೆಗಳ ಪಟ್ಟಿ ಮತ್ತು ವಸತಿ ಗಣತಿಗಾಗಿ ಅಗತ್ಯ ಸಿಬ್ಬಂದಿ ಅಂದರೆ ಶಿಕ್ಷಕರು, ನೌಕರರ ನೇಮಕವಾಗಬೇಕು. ಈ ಸಂಬಂಧ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿಯನ್ನು ಸಿಎಂಎಂಎಸ್ ಪೋರ್ಟಲ್‌ನಲ್ಲಿ ಪೂರ್ಣಗೊಳಿಸಬೇಕು. ಜಿಪಿಎಸ್ ಆಧಾರಿತ ಡಿಜಿಟಲ್ ಮ್ಯಾಪಿಂಗ್ ಸಿದ್ಧತೆ ಮಾಡಿಕೊಳ್ಳಬೇಕು. ಜನಗಣತಿ ಪ್ರಕ್ರಿಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಲು ಮಹತ್ವದ ಸುತ್ತೋಲೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರ ಪ್ರಕಾರ ಕೆಲಸ ಮಾಡಬೇಕು. ಜನಗಣತಿಗೆ ಅವಶ್ಯಕವಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕವಾಗಬೇಕು. ಈ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಶಿಕ್ಷಕರು ಮತ್ತು ಇತರ ಇಲಾಖೆ ಸಿಬ್ಬಂದಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾರದಿಂದ ಬರುವ ಮಹತ್ವದ ಸುತ್ತೋಲೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನರಸಿಂಹ ಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಧಿತರಿದ್ದರು.