ಮಂಡ್ಯ ನಗರದ ಮರೀಗೌಡ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಿಮೆಂಟ್ ರಸ್ತೆಯನ್ನು ಶಾಸಕ ಪಿ.ರವಿಕುಮಾರ್ ಗಣಿಗ ಲೋಕಾರ್ಪಣೆಗೊಳಿಸಿದರು.  
ಮಂಡ್ಯ

ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ ಪಿ.ರವಿಕುಮಾರ್ ಗಣಿಗ ಭರವಸೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ವಿವಿಧೆಡೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಮಂಡ್ಯ: ನಗರಸಭಾ ವ್ಯಾಪ್ತಿಯ ಎಲ್ಲ ರಸ್ತೆ ಮತ್ತು ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಮರೀಗೌಡ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಿಮೆಂಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ವಾರ್ಡ್‌ನ ರಸ್ತೆ, ಉದ್ಯಾನ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ನಾಗರಿಕರ ಅನುಕೂಲಕ್ಕಾಗಿ ವಾಕಿಂಗ್ ಪಾತ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವ್ಯಾಯಾಮ ಪರಿಕರಗಳನ್ನು ಅಳವಡಿಸಲಾಗುವುದು. ಒಂದು ವೇಳೆ ಹದಗೆಟ್ಟಿದ್ದರೆ ದುರಸ್ತಿ ಮಾಡಿಸಲಾಗುವುದು ಎಂದು ನುಡಿದರು.
ಮಂಡ್ಯ ನಗರವನ್ನು ಬದಲಾವಣೆ ಮಾಡಿ, ಸುಂದರ ನಗರವನ್ನಾಗಿ ಕಟ್ಟಿಕೊಡುತ್ತೇನೆ. ನಗರದ ಪ್ರಮುಖ ವೃತ್ತಗಳಿಗೆ ನಾವೀನ್ಯತೆಯಲ್ಲಿ ನಿರ್ಮಾಣ ಮಾಡಿ ತೋರಿಸುತ್ತೇವೆ. ಹತ್ತಾರು ವರ್ಷ ಕಳೆದರೂ ಹಾಳಾಗದಂತಹ ಗುಣಮಟ್ಟದ ರಸ್ತೆಗಳು ನಾಗರಿಕರ ಅನುಕೂಲಗುವಂತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪೌರಾಯುಕ್ತೆ ಪಂಪಾಶ್ರೀ, ಯೋಗಗುರು ಎಂ.ಎಚ್.ಚಂದ್ರು, ಯುವ ಮುಖಂಡರಾದ ನಿರಂಜನ್, ಅನೂಪ್, ಗುರು ಆತ್ಮಾನಂದ, ಸತೀಶ್ ಬಾಬು, ರವೀಶ್, ಸಾಹಿತಿ ವೀರಪ್ಪ, ಉದಯ್, ಶುಭದಾಯಿನಿ, ಸುಜಾತಾ ಸಿದ್ದಯ್ಯ, ಜ್ಯೋತಿ ಮತ್ತಿತರರಿದ್ದರು. ಇದೇ ವೇಳೆ ನಗರದ ವಿವಿಧೆಡೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.