ಮಂಡ್ಯ ನಗರದ ಶಂಕರಮಠದಲ್ಲಿ ಜೀವಧಾರೆ ಟ್ರಸ್ಟ್‌ನ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ ಮಾಡಲಾಯಿತು. 
ಮಂಡ್ಯ

ಯುವ ಸಂಘಟನೆಗಳಿಗೆ ಜೀವಧಾರೆ ಮಾದರಿ: ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಶ್ಲಾಘನೆ

ಪ್ರಮುಖ ಮುಖ್ಯಾಂಶಗಳು

  • 25ನೇ ವಾರ್ಷಿಕೋತ್ಸವ ಸಮಾರಂಭ
  • ನೆಹರು ನಗರದಲ್ಲಿರುವ ಶಂಕರಮಠದಲ್ಲಿ ಆಚರಣೆ
ಮಂಡ್ಯ: ಜನರ ಅಮೂಲ್ಯ ಜೀವ ಉಳಿಸುವ ನಿಟ್ಟಿನಲ್ಲಿ ಕಳೆದ 25 ವರ್ಷದಿಂದ ರಕ್ತ ಸಂಗ್ರಹ ಮಾಡಿ ದಾಖಲೆ ಮಾಡಿರುವ ಜೀವಧಾರೆ ಟ್ರಸ್ಟ್‌ನ ಸೇವೆ ಇತರೆಲ್ಲ ಯುವ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಶ್ಲಾಘಿಸಿದರು.
ಇಲ್ಲಿನ ನೆಹರು ನಗರದಲ್ಲಿರುವ ಶಂಕರಮಠದಲ್ಲಿ ಜೀವಧಾರೆ ಟ್ರಸ್ಟ್‌ನ 25ನೇ ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಜೀವಧಾರೆ ಕುಟುಂಬದ ಹೆಣ್ಣು ಮಕ್ಕಳಿಗೆ ಕುಂಕುಮ ನೀಡಿ ಮಡಿಲು ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಟ್ರಸ್ಟ್ ಇದುವರೆ ಸುಮಾರು 50 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿರುವುದು ಸಾಮಾನ್ಯವಾದ ವಿಚಾರವಲ್ಲ. ಸುಮಾರು 371 ಶಿಬಿರಗಳನ್ನು ರಾಜ್ಯದ 16 ಜಿಲ್ಲೆಗಳಲ್ಲಿ ಮಾತ್ರವಲ್ಲ, ದೆಹಲಿ ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲೂ ಶಿಬಿರಗಳನ್ನು ಆಯೋಜಿಸಿ ದಾಖಲೆ ಮಾಡಿದ್ದಾರೆ. ಜೀವಧಾರೆ ಟ್ರಸ್ಟ್‌ನ ಹಿಂದೆ ಅನೇಕ ಯುವಕರು ಶ್ರಮಿಸಿದ್ದಾರೆ. ಇವರ ಪರಿಶ್ರಮವನ್ನು ನೋಡಿ ನಾನು ಕೂಡ ರಕ್ತದಾನ ಮಾಡಿದ್ದೇನೆ. ಜೀವಧಾರೆ ಟ್ರಸ್ಟ್‌ನ ನಟರಾಜು ಅವರು ಹೆಣ್ಣು ಮಕ್ಕಳ ಪಡೆಯನ್ನು ರಚಿಸಿ, ಜತೆ ಜತೆಗೆ ಹೆಣ್ಣು ಮಕ್ಕಳ ಸಮಸ್ಯೆ ನಿವಾರಣೆಗೂ ಸೂಕ್ತ ವೇದಿಕೆ ರಚಿಸುವಂತೆ ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ವರ್ಚಸ್ವಿ ಸಿದ್ದಲಿಂಗರಾಜ ಅರಸ್ ಮಾತನಾಡಿ, ಇತ್ತೀಚೆಗೆ ರಸ್ತೆ ಅಪಘಾತಗಳಲ್ಲಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ಚಾಲನೆ ಮಾಡುವುದು ಹಾಗೂ ಸಂಚಾರ ನಿಯಮಗಳನ್ನು ಪಾಲಿಸದಿರುವುದು ಪ್ರಮುಖವಾಗಿದೆ. ಇದರಿಂದ ತಮ್ಮ ಕುಟುಂಬದವರನ್ನು ಸಂಕಷ್ಟಕ್ಕೆ ಸಿಲುಕಿಸಿ ತಾವು ಇಹಲೋಕದಿಂದ ನಿರ್ಗಮಿಸುತ್ತಾರೆ. ಈ ಪರಿಸ್ಥಿತಿಯನ್ನು ತಪ್ಪಿಸಲು ನಟರಾಜು ಅವರು ಜಾಗೃತಿ ಕಾರ್ಯಕ್ರಮ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು.
ಬಹುತೇಕ ವಾಹನ ಚಾಲಕರು ಪೊಲೀಸರ ದಂಡಕ್ಕೆ ಹೆದರಿ ಹೆಲ್ಮೆಟ್ ಧರಿಸುತ್ತಾರೆ. ಆದರೆ, ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಬೇಕೆಂದು ಅವರು ಹೆಲ್ಮೆಟ್ ಧರಿಸುವುದಿಲ್ಲ ಎಂದು ವಿಷಾಧಿಸಿದರು. ಅಪಘಾತದಿಂದ ತುರ್ತು ಪರಿಸ್ಥಿತಿಯಲ್ಲಿರುವವರ ಜೀವ ರಕ್ಷಣೆಗೆ ಅತ್ಯಂತ ಅಮೂಲ್ಯವಾದ ರಕ್ತ ಸಂಗ್ರಹಿಸಿ ಕೊಡುತ್ತಿರುವ ಜೀವಧಾರೆ ಟ್ರಸ್ಟ್‌ನ ಚಾಲನಾ ಶಕ್ತಿಯಾದ ನಟರಾಜ್ ಮತ್ತವರ ತಂಡಕ್ಕೆ ಶುಭವಾಗಲೆಂದು ಹಾರೈಸಿದರು. ಟ್ರಸ್ಟ್ ಅಧ್ಯಕ್ಷ ನಟರಾಜು, ಪ್ರಶಾಂತ್, ಶಶಿಧರ್, ಚಂದ್ರ, ಬೆಟ್ಟಪ್ಪ, ಮಧು, ಸಂತೋಷ್, ನವೀನ್, ವಿನಯ್, ಎಂ.ಬಿ.ರಮೇಶ್ ಇತರರಿದ್ದರು.