ನಾಗಮಂಗಲ ಪಟ್ಟಣದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾಮರಸ್ಯ ಸಭೆಯಲ್ಲಿ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿದರು.  
ಮಂಡ್ಯ

ಸಾಮರಸ್ಯದಿಂದ ಯುಗಾದಿ, ರಂಜಾನ್ ಆಚರಿಸಿ

ನಾಗಮಂಗಲ: ಯುಗಾದಿ ಹಾಗೂ ರಂಜಾನ್ ಹಬ್ಬದ ವೇಳೆ ಎರಡೂ ಸಮುದಾಯದವರು ಸಾಮರಸ್ಯ ಕಾಪಾಡಿಕೊಂಡು ಯಾವುದೇ ಘಟನೆಗಳಿಗೂ ಅವಕಾಶ ಕೊಡದಂತೆ ಸಂಭ್ರಮದಿಂದ ಆಚರಿಸಬೇಕು. ನಿಯಮ ಉಲ್ಲಂಘಿಸಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಎಚ್ಚರಿಕೆ ನೀಡಿದರು.
ಯುಗಾದಿ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾಮರಸ್ಯ ಸಭೆಯಲ್ಲಿ ಮಾತನಾಡಿ, ಎಲ್ಲರಿಗೂ ಒಂದೇ ದೇವರು. ಆದರೆ ಅವರವರ ಧರ್ಮಕ್ಕೆ ಅನುಗುಣವಾಗಿ ಪೂಜೆ ಪ್ರಾರ್ಥನೆ ಮಾಡುವುದು ಸಂಪ್ರದಾಯ. ಹಬ್ಬ ಹಬ್ಬವಾಗಿ ಉಳಿಯಬೇಕೇ ಹೊರತು, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಬಾರದು. ಪೊಲೀಸರ ಮನೆಗಳಲ್ಲಿಯೂ ಹಬ್ಬವಿರುತ್ತದೆ. ಆದರೆ ಜನರ ಸುರಕ್ಷತೆ ದೃಷ್ಟಿಯಿಂದ ನಾವು ಹಬ್ಬ ಮಾಡುವುದನ್ನು ಬಿಟ್ಟು ಜನರು ಸಂಭ್ರಮದಿಂದ ಹಬ್ಬ ಮಾಡುವಂತೆ ಕರ್ತವ್ಯ ನಿರ್ವಹಿಸುತ್ತಿರುತ್ತೇವೆ. ಅದಕ್ಕೆ ಗೌರವ ತಂದುಕೊಡುವ ರೀತಿಯಲ್ಲಿ ಎರಡೂ ಸಮುದಾಯದವರು ಖುಷಿಯಿಂದ ಹಬ್ಬವನ್ನು ಸಂಭ್ರಮಿಸಬೇಕು ಎಂದು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ ಯಾವುದೇ ಘಟನೆ ಸಂಭವಿಸಿದರೂ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಅಹಿತಕರ ಘಟನೆಗಳಿಗೆ ಯುವಕರು ಕಾರಣರಾದರೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಭವಿಷ್ಯದಲ್ಲಿ ಉದ್ಯೋಗಾವಕಾಶಗಳೂ ಕಡಿಮೆಯಾಗುತ್ತವೆ. ವಿದೇಶಗಳಿಗೆ ಹೋಗಬೇಕೆಂದರೆ ಪಾಸ್‌ಪೋರ್ಟ್ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದರು.
ಇಸ್ಪೀಟ್ ಆಡುವಂತಿಲ್ಲ: ಹಬ್ಬದ ನೆಪದಲ್ಲಿ ಸಾರ್ವಜನಿಕವಾಗಿ ಟೆಂಟ್ ಹಾಕಿಕೊಂಡು ಇಸ್ಪೀಟ್ ಆಡುವಂತಿಲ್ಲ. ರಾತ್ರಿ ವೇಳೆ ಅನವಶ್ಯಕವಾಗಿ ಓಡಾಡಬಾರದು. ರಸ್ತೆಯಲ್ಲಿ ವ್ಹೀಲಿಂಗ್ ಮಾಡಬಾರದು. ಕಾನೂನುಬಾಹಿರ ಚಟುವಟಿಕೆ ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು. ಹಬ್ಬ ಆಚರಣೆಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಭದ್ರತೆ ಒದಗಿಸಲಾಗುವುದು. ಬಂದೋಬಸ್ತ್‌ಗೆ ಎಷ್ಟು ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಬೇಕೆಂದು ಪರಿಶೀಲಿಸಿ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿದ್ದ ಹಿಂದೂ ಹಾಗೂ ಮುಸ್ಲಿಂ ಮುಖಂಡರು ಪರಸ್ಪರ ಸೌಹಾರ್ದತೆ ಕಾಪಾಡಿಕೊಂಡು ಸಂಭ್ರಮದಿಂದ ಹಬ್ಬ ಆಚರಿಸುತ್ತೇವೆ ಎಂದು ತಿಳಿಸಿದರು. ಡಿವೈಎಸ್‌ಪಿ ಬಿ.ಚಲುವರಾಜು, ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಸಿಪಿಐ ಹೇಮಂತ್‌ಕುಮಾರ್, ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ, ನಾಗಮಂಗಲ ಗ್ರಾಮಾಂತರ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಲಕ್ಷ್ಮಣ ಕಾಮಣ್ಣವರ್ ಇದ್ದರು.