ನಾಗಮಂಗಲ ಪಟ್ಟಣದ ತಾಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ತಹಸೀಲ್ದಾರ್ ಅಶೋಕ್ ಸ್ವಾತಂತ್ರ್ಯ ದಿನಾಚರಣೆ ಕುರಿತಾಗಿ ಪೂರ್ವಭಾವಿ ಸಭೆ ನಡೆಸಿದರು. ಜೆ.ವೈ. ಮಂಜುನಾಥ್,ದೊಳ್ಳೇಗೌಡ ಇತರರಿದ್ದರು.
- ತಹಸೀಲ್ದಾರ್ ಅಶೋಕ್ ಸಲಹೆ
- ಪೂರ್ವಭಾವಿ ಸಭೆ
ಸ್ವಾತಂತ್ರ್ಯೋತ್ಸವವನ್ನು ನಾಗಮಂಗಲ ತಾಲೂಕಿನಲ್ಲಿ ಅತ್ಯಂತ ಸಂಭ್ರಮ, ಸಡಗರದಿ
ದ ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ತಹಸೀಲ್ದಾರ್ ಅಶೋಕ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವವು ರಾಷ್ಟ್ರಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ಸಂವಿಧಾನದ ಮೌಲ್ಯಗಳನ್ನು ಜನರಲ್ಲಿ ಮತ್ತಷ್ಟು ಬಲಪಡಿಸುವ ಹಬ್ಬವಾಗಿದ್ದು, ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗಸ್ಟ್ 15ರಂದು ಬೆಳಗ್ಗೆ 9.30 ಗಂಟೆಗೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಧ್ವಜಾರೊಹಣ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದೆ. ತಾಲೂಕು ದಂಡಾಧಿಕಾರಿಯಾಗಿ ಅಶೋಕ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದು, ವಿಶೇಷ ಅತಿಥಿಯೊಬ್ಬರು ಉಪನ್ಯಾಸ ನೀಡುವರು. ಇದೇ ವೇದಿಕೆಯಲ್ಲಿ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಸೆಸ್ಕ್, ಗೃಹರಕ್ಷಕ ದಳ, ಕೆಎಸ್‌ಆರ್ ಟಿಸಿ ಇಲಾಖೆಯಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಒಬ್ಬಬ್ಬರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
ಬಳಿಕ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೂ ಮೊದಲು ತಾಲೂಕು ಆಡಳಿತಸೌಧದಿಂದ ಕ್ರೀಡಾಂಗಣದವರೆಗೆ ತಾಯಿ ಭಾರತಾಂಬೆಯ ಭಾವಚಿತ್ರವನ್ನು ಅಲಂಕರಿಸಿದ ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ ಅದ್ದೂರಿ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ. ಮಂಜುನಾಥ್, ಎಡಿಎಲ್‌ಆರ್ ದೊಳ್ಳೇಗೌಡ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್, ಕನ್ನಡ ಸಂಘದ ನಟರಾಜ್, ಸಾಹಿತಿ ಮಹಮ್ಮದ್ ಖಲೀಂಉಲ್ಲಾ, ಶಿಕ್ಷಣ ಇಲಾಖೆಯ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.