ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗೂಂಡಾಗಿರಿಯ ದೃಶ್ಯಗಳು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿರುವುದು.  
ಮಂಡ್ಯ

ಕಿಡಿಗೇಡಿಗಳಿಂದ ಕಾರು ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಪ್ರಮುಖ ಮುಖ್ಯಾಂಶಗಳು

  • ಸಿನಿಮೀಯ ಶೈಲಿಯಲ್ಲಿ ಪುಂಡಾಟಿಕೆ
  • ಮೂವರ ಬಂಧನ, ಉಳಿದವರಿಗಾಗಿ ಶೋಧ
ಮದ್ದೂರು: ಕಾರುಗಳ ನಡುವೆ ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಕಿಡಿಗೇಡಿಗಳ ಗುಂಪು ಮತ್ತೊಂದು ಕಾರು ಚಾಲಕನ ಮೇಲೆ ಭೀಕರವಾಗಿ ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಅತ್ತಿಗುಪ್ಪೆ ನಿವಾಸಿ ಸಾಗರ್ ತೀವ್ರವಾಗಿ ಗಾಯಗೊಂಡಿದ್ದು, ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಬೆಂಗಳೂರು ನಿವಾಸಿಗಳಾದ ಸಂತೋಷ್, ಅರುಣ್‌ಕುಮಾರ್ ಹಾಗೂ ಅಭಿಷೇಕ್ ಅವರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಉಳಿದವರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಘಟನೆ ವಿವರ: ಜುಲೈ 5ರಂದು ಸಾಗರ್ ಅವರು ಪತ್ನಿ, ತಾಯಿ ಹಾಗೂ 5 ವರ್ಷದ ಮಗುವಿನೊಂದಿಗೆ ಮೈಸೂರಿನಿಂದ ರಾತ್ರಿ 9.22 ಸಮಯದಲ್ಲಿ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಶ್ರೀರಂಗಪಟ್ಟಣ ಬಳಿ ಸಾಗರ್ ಪ್ರಯಾಣಿಸುತ್ತಿದ್ದ ಕಾರು ಮತ್ತೊಂದು ಕಾರಿಗೆ ತಾಗಿತ್ತು. ಅದಕ್ಕೆ ರೊಚ್ಚಿಗೆದ್ದ ಪುಂಡರ ಗುಂಪು ಸಾಗರ್ ಅವರೊಂದಿಗೆ ಗಲಾಟೆ ಮಾಡಿದೆ. ಈ ವೇಳೆ ಸಾಗರ್ ಕುಟುಂಬ ಅಲ್ಲಿಂದ ಮುಂದೆ ಸಾಗಿದರೂ ಬಿಡದ ಕಿಡಿಗೇಡಿಗಳ ಗುಂಪು ಎರಡು ಕಾರುಗಳಲ್ಲಿ ಹಿಂಬಾಲಿಸಿಕೊಂಡು ಬಂದಿದೆ.
ಸಾಗರ್ ಅವರ ಕಾರು ಸುಮಾರು 10 ಗಂಟೆ ಸಮಯದಲ್ಲಿ ಮದ್ದೂರಿನ ಫ್ಲೈ ಓವರ್ ತಲುಪುತ್ತಿದ್ದಂತೆ ಎರಡು ಕಾರುಗಳಲ್ಲಿ ಬಂದ ಪುಂಡರು, ಸಿನಿಮಾ ಸ್ಟೈಲ್‌ನಲ್ಲಿ ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ಕಾರಿನಿಂದ ಸಾಗರ್ ಅವರನ್ನು ಹೊರಗೆಳೆದು ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ದಯವಿಟ್ಟು ಬಿಟ್ಟುಬಿಡಿ ಎಂದು ಕುಟುಂಬಸ್ಥರು ಅಂಗಲಾಚಿದರೂ ಪುಂಡರು, ಸಾಗರ್ ತಲೆಗೆ ಕಾರಿನ ಜಾಕ್ ರಾಡ್‌ನಿಂದ ಮನಬಂದಂತೆ ಹೊಡೆದಿದ್ದಾರೆ.
ನನ್ನ ತಂದೆಗೆ ಏನೂ ಮಾಡಬೇಡಿ ಎಂದು 5 ವರ್ಷದ ಪುಟ್ಟ ಮಗು ಕಣ್ಣೀರಿಡುತ್ತ ಬೇಡಿಕೊಂಡರೂ ಕರುಣೆ ತೋರದ ಕಿಡಿಗೇಡಿಗಳು ಪುಟ್ಟ ಕಂದಮ್ಮನ ಕೈ ನುಣಚಿ ವಿಕೃತಿ ಮೆರೆದಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಮದ್ದೂರು ಪೊಲೀಸರು, ಪುಂಡರ ಕೈಯಿಂದ ಸಾಗರ್ ಕುಟುಂಬವನ್ನು ರಕ್ಷಿಸಿದ್ದಾರೆ. ಸದ್ಯ ಈ ಭೀಕರ ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಗೂಂಡಾಗಳ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಗೂಂಡಾಗಿರಿಯ ದೃಶ್ಯಗಳು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿವೆ.