ಕೆ.ಎಂ.ದೊಡ್ಡಿ: ಸಮೀಪದ ಚಿಕ್ಕರಸಿನಕೆರೆ ಗ್ರಾಮದ ಕೆರೆಯಲ್ಲಿ ಈಜಲು ಹೋದ ಕಾರು ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಳವಳ್ಳಿ ತಾಲೂಕು ಬಾಣಸಮುದ್ರ ಗ್ರಾಮದ ಚಂದ್ರಶೇಖರ್ (24) ಮೃತರು. ಬೆಂಗಳೂರಿನಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದು, ಚಿಕ್ಕ ಅರಸಿನಕೆರೆ ಗ್ರಾಮದ ಶ್ರೀ ಕಾಲಭೈರವೈಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ದೇಗುಲದ ಬಳಿ ಇರುವ ಕೆರೆಯಲ್ಲಿ ಈಜಲು ಹೋದ ಚಂದ್ರಶೇಖರ್ ಕೆರೆಯ ಮತ್ತೊಂದು ದಡಕ್ಕೆ ಹೋಗಿ ವಾಪಸ್ ಬರುವ ವೇಳೆ ಮುಳುಗಿ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಹೊರ ತೆಗೆದರು.
ಕೆ.ಎಂ. ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಭೇಟಿ ನೀಡಿದ್ದರು. ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.