ಹೊನ್ನಾಯಕನಹಳ್ಳಿ ಹೆಬ್ಬಕವಾಡಿ ಶಾಖಾ ನಾಲೆಯ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಕದಲೂರು ಉದಯ್ ವಿಕ್ಷೀಸಿದರು.
ಕೆ.ಎಂ.ದೊಡ್ಡಿ: ರೈತರ ಸಮಸ್ಯೆಗಳನ್ನು ಅರಿತು ಜಮೀನುಗಳಿಗೆ ಸಮರ್ಪಕ ನೀರು ತಲುಪುವಂತೆ ಮಾಡಲು ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಅಣ್ಣೂರು, ಮೆಣಸಗೆರೆ, ಬೊಪ್ಪಸಮುದ್ರ, ಹೊನ್ನಾಯಕನಹಳ್ಳಿ, ಪುಟ್ಟೇಗೌಡನದೊಡ್ಡಿ ಹೆಬ್ಬಕವಾಡಿ ಶಾಖಾ ನಾಲೆಯ ಅಭಿವೃದ್ಧಿ ಕಾಮಗಾರಿ ವಿಕ್ಷೀಸಿದ ನಂತರ ಮಾತನಾಡಿದ ಅವರು, ನಾನು ಕೂಡ ರೈತನ ಮಗ. ರೈತರ ಸಮಸ್ಯೆಗಳು, ಕಷ್ಟಗಳು ನನಗೂ ತಿಳಿದಿದೆ. ಈ ಹಿಂದೆ ಜಮೀನುಗಳಿಗೆ ನೀರು ಸರಿಯಾಗಿ ಹರಿಯದೆ ಸಾಕಷ್ಟು ತೊಂದರೆ, ನಷ್ಟ ಅನುಭವಿಸುತ್ತಿದ್ದರು. ಇದನ್ನು ತಿಳಿದು ನೀರಿನ ಸಮಸ್ಯೆ ನಿವಾರಿಸಲು, ಕೊನೆ ಭಾಗದ ಜಮೀನುಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡಲು ನಾಲೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ನಾಲೆ ಕಾಮಗಾರಿಗೂ ಚಾಲನೆ ನೀಡಲಾಗಿದೆ. ರೈತರು ಯಾವುದೇ ರಾಜಕೀಯ ಮಾಡದೆ, ವಿರೋಧಿಗಳ ಮಾತಿಗೆ ಕಿವಿಗೊಡದೆ ಅಭಿವೃದ್ಧಿಗೆ ಕೈಜೋಡಿಸಬೇಕು. ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಇದರಿಂದ ಈ ಭಾಗದ ಹಲವು ಹಳ್ಳಿಗಳ ಸುಮಾರು 6,500 ಎಕರೆ ಜಮೀನುಗಳಿಗೆ ನೀರು ಸರಾಗವಾಗಿ ಹರಿಯಲಿದೆ ಎಂದರು.
ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಕಾರ್ಯಪಾಲಕ ಇಂಜನಿಯರ್ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಲ್.ಪ್ರಶಾಂತ್, ಸಹಾಯಕ ಇಂಜಿನಿಯರ್ ಅವಿನಾಶ್ ಇದ್ದರು.