ಶ್ರೀರಂಗಪಟ್ಟಣದ ರಾಮಚಂದ್ರ ಮಠದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ನಡೆಯಿತು. 
ಮಂಡ್ಯ

ಕ್ಯಾನ್ಸರ್ ಸಂಪೂರ್ಣ ಗುಣ ಸಾಧ್ಯ

ನಾಗೇಶ ಎಸ್
ಶ್ರೀರಂಗಪಟ್ಟಣ: ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದು, 30ರಿಂದ 65 ವರ್ಷದೊಳಗಿನ ಮಹಿಳೆಯರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಖ್ಯಾತ ವೈದ್ಯ ಡಾ.ಸುಜಯ್ ಕುಮಾರ್ ತಿಳಿಸಿದರು.
ಪಟ್ಟಣದ ರಾಮಚಂದ್ರ ಮಠದಲ್ಲಿ ಮಂಗಳವಾರ ಐಕ್ಯ ಅಲಯನ್ಸ್ ಸಂಸ್ಥೆ, ಮಾನುಸಿ ಫೌಂಡೇಶನ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ ರೋಟರಿ, ಅನನ್ಯ ಹಾರ್ಟ್ ಸಂಸ್ಥೆ, ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚಾಗಿ ಜನರಲ್ಲಿ ರೋಗಗಳು ಹೆಚ್ಚಾಗಿ ಬಾಧಿಸತೊಡಗಿವೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೈಪರ್ ಟೆನ್ಷನ್ ಸೇರಿದಂತೆ ಕ್ಯಾನ್ಸರ್ ರೋಗಗಳು ಅತಿ ಹೆಚ್ಚಾಗಿ ಕಾಡುತ್ತಿವೆ. ಹೀಗಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಹೊಂದುವುದು ಅತ್ಯಂತ ಅಗತ್ಯ ಎಂದು ಹೇಳಿದರು.
ಡಾ.ವಿಜಯ ಶ್ರೀನಿವಾಸ ಮಾತನಾಡಿ, ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸುತ್ತಿದ್ದು, ಪ್ರತಿ ಎಂಟು ನಿಮಿಷಕ್ಕೊಬ್ಬರು ರೋಗದಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿ ಸಂಗತಿ. ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಎಚ್‌ಪಿವಿ, ಡಿಎನ್‌ಎ ಪರೀಕ್ಷೆಯ ಮೂಲಕ ಈ ರೋಗವನ್ನು ಬೇಗ ಪತ್ತೆ ಹಚ್ಚಬಹುದಾಗಿದೆ. ಜತೆಗೆ ಹೆಣ್ಣು ಮಕ್ಕಳಿಗೆ ಈ ರೋಗ ಬರದಂತೆ ತಡೆಗಟ್ಟಲು ವ್ಯಾಕ್ಸಿನೇಷನ್ ಹಾಕಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಪರ್ಜಾನ ಪ್ರಮೀಳಾ, ಐಕ್ಯಾ ಆಲಯನ್ಸ್ ಸಂಸ್ಥೆ ಅಧ್ಯಕ್ಷೆ ಲಯನ್ ಎನ್.ಸರಸ್ವತಮ್ಮ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಆಶಾಲತಾ ಪುಟ್ಟೇಗೌಡ, ಅನನ್ಯಾ ಹಾರ್ಟ್ ಸಂಸ್ಥೆ ಮುಖ್ಯಸ್ಥೆ ಬಿ.ಎಸ್.ಅನುಪಮಾ, ರೋಟರಿ ಸಂಸ್ಥೆ ತಾಲೂಕು ಅಧ್ಯಕ್ಷ ಆರ್.ರಾಘವೇಂದ್ರ, ಸದಸ್ಯರಾದ ಬನಶಂಕರಿ, ಸುವರ್ಣದೇವಿ, ಬಸವರಾಜು, ಪುರುಷೋತ್ತಮ್, ವೆಂಕಟರಂಗಯ್ಯ, ನಳಿನ, ಗಾಯತ್ರಿ, ವಿಜಯಕುಮಾರ್, ಸ್ವಾಮೀಗೌಡ ಇದ್ದರು.