illegal appointment cancelled
ಶ್ರೀರಂಗಪಟ್ಟಣ : ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅಕ್ರಮವಾಗಿ ನೇಮಕ ಮಾಡಿದ್ದ ವ್ಯಕ್ತಿಯನ್ನು ಸೇವೆಯಿಂದ ಅಮಾನತುಗೊಳಿಸುವ ಮೂಲಕ ಜಿಪಂ ಸಿಇಒ ಕೆ.ಆರ್.ನಂದಿನಿ ಕ್ರಮ ಕೈಗೊಂಡಿದ್ದಾರೆ ಎಂದು ಗ್ರಾಪಂ ಸದಸ್ಯ ರಾಮು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಲಿಕೆರೆ ಗ್ರಾಮ ಪಂಚಾಯಿತಿಯಲ್ಲಿ 2020ರ ಸಾಲಿನಲ್ಲಿ ಕರ್ನಾಟಕ ಗ್ರಾಮಸ್ಥರು ಮತ್ತು ಪಂಚಾಯತ್ ರಾಜ್‌ನ 1993ರ ಅಧಿನಿಯಮಗಳನ್ನು ಗಾಳಿಗೆ ತೂರಿ ಬಹಳಷ್ಟು ಪ್ರಭಾವ ಬಳಸಿ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಿಲ್ ಕಲೆಕ್ಟರ್ ಹುದ್ದೆಗೆ ನೇಮಕ ಮಾಡಲಾಗಿತ್ತು. ಈತ ಕಾನೂನಿನ ಯಾವುದೇ ಮಾನದಂಡಗಳ ಅಡಿಯಲ್ಲಿ ನೇಮಕಗೊಳ್ಳದೆ ಕಾರ್ಯನಿರ್ವಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ ಹಾಗೂ 18 ಜನ ಸದಸ್ಯರ ಗಮನಕ್ಕೆ ತಂದಿದ್ದರೂ, ಅಧ್ಯಕ್ಷರ ಹಾದಿಯಾಗಿ ಇಡೀ ಗ್ರಾಪಂ ಆಡಳಿತ ಆ ಪ್ರಭಾವಿ ಬಿಲ್ ಕಲೆಕ್ಟರ್ ಸಿಬ್ಬಂದಿ ಪರವಹಿಸಿಕೊಂಡು ನನ್ನ ದೂರು ನಿರ್ಲಕ್ಷಿಸಿದ್ದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
2 ವರ್ಷಗಳಿಂದ ಅಕ್ರಮದ ವಿರುದ್ಧ ತಾವು ಏಕಾಂಗಿಯಾಗಿ ದನಿ ಎತ್ತಿ ಸತತವಾಗಿ ಪ್ರತಿಭಟಿಸಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ ಉಲ್ಲಂಘಿಸಿರುವ ವಿರುದ್ಧ 43(ಎ) ಮತ್ತು 48ರ ಪ್ರಕರಣದಡಿ ಅಧ್ಯಕ್ಷರ ಅಧಿಕಾರ ದುರುಪಯೋಗ ವಿಚಾರಣೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಲ್ಲಿ ದೂರು ದಾಖಲಿಸಿ ವಿಚಾರಣೆ ಹಂತದಲ್ಲಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರ ನಿರ್ದೇಶನದಂತೆ ತನಿಖಾ ತಂಡ ರಚಿಸಿ ಸಮಗ್ರ ಪರಿಶೀಲನೆ ನಡೆಸಲಾಗಿತ್ತು. ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಈ ಮೊದಲೇ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳದ ಪಿಡಿಒ ನಟೇಶ್ ಅವರನ್ನು ಸೇವೆಯಿಂದ ಅಮಾನತುಪಡಿಸಿ, ಅಧ್ಯಕ್ಷರಿಗೆ ನೋಟಿಸ್ ನೀಡಿ ಬಿಲ್‌ಕಲೆಕ್ಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್.ವಿ.ಹೇಮಂತ್ ಕುಮಾರ್ ಎಂಬಾತನ ಅನುಮೋದನೆಯನ್ನು ಡಿ.5ರಿಂದ ರದ್ದುಪಡಿಸಿದೆ. ಈ ಮೂಲಕ ನ್ಯಾಯ ಸಮ್ಮತ ಹೋರಾಟಕ್ಕೆ ಜಯ ದೊರಕಿದೆ ಎಂದು ತಿಳಿಸಿದರು.
ಹುಲಿಕೆರೆ ಗ್ರಾಪಂ ಮಾಜಿ ಸದಸ್ಯೆ ರೇಷ್ಮಾಬಾನು, ಸಾಮಾಜಿಕ ಹೋರಾಟಗಾರರಾದ ಹುಲಿಕೆರೆ ಶ್ರೀನಿವಾಸ್, ಎಂ.ಎನ್.ಪಿ.ಎಮ್. ಕಾಲನಿ ಮಹೇಶ್ ಕುಮಾರ್ ಇತರರು ಈ ಇದ್ದರು.