ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಫೂರ್ತಿ ಲಯನ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಹಸಿವು, ಆರೈಕೆ ಮತ್ತು ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮವನ್ನು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಜನರಕ್ಷಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ, ಲಯನ್ಸ್ ಜಿಲ್ಲಾ ಪ್ರಾಂತಪಾಲ ಕೆ.ಎಲ್. ರಾಜಶೇಖರ, ಪ್ರಾಂತೀಯ ಅಧ್ಯಕ್ಷ ಟಿ.ಆರ್.ಸೋಮೇಗೌಡ ಇತರರು ಇದ್ದರು.
ಎಂ.ದೊಡ್ಡಿ : ಪ್ರಸ್ತುತ ದಿನಗಳಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಇದು ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತಿದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಫೂರ್ತಿ ಲಯನ್ಸ್ ಸಂಸ್ಥೆ ವತಿಯಿಂದ ಹಸಿವು, ಆರೈಕೆ ಮತ್ತು ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಂಕಿ ಅಂಶದ ಪ್ರಕಾರ ಶೇ. 80ರಷ್ಟು ಗರ್ಭಿಣಿಯರು ಸಿಜೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕವೇ ಮಕ್ಕಳನ್ನು ಪಡೆಯುತ್ತಿದ್ದಾರೆ. ಸಹಜ ಹೆರಿಗೆ ಎಂಬುದೇ ಅಪರೂಪವಾಗುತ್ತಿದೆ. ಸಿಜೇರಿಯನ್‌ನಿಂದ ಜೀವಿತದ ಆರೋಗ್ಯಕ್ಕೆ ಮಾರಕ ಪರಿಣಾಮವಾಗಲಿದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದರು. ಗರ್ಭಿಣಿಯರು ಸ್ಥಳೀಯವಾಗಿ ದೊರೆಯುವ ಹಾಲು, ಮೊಟ್ಟೆ, ನುಗ್ಗೇ ಸೊಪ್ಪು, ಸೀಬೆ, ಪರಂಗಿ ಹಣ್ಣು ಸೇರಿದಂತೆ ಇತರೆ ತರಕಾರಿಗಳನ್ನು ಹೆಚ್ಚು ಸೇವಿಸಿ ಸದೃಢ ಆರೋಗ್ಯ ಪಡೆಯಬೇಕು. ಮಿತಿ ಮೀರಿದ ವಿಶ್ರಾಂತಿ ಪಡೆಯದೇ ದೈನಂದಿನ ಕೆಲಸಗಳನ್ನು ಮಾಡುತ್ತ ಸಹಜ ಹೆರಿಗೆಗೆ ದೇಹವನ್ನು ಅಣಿಗೊಳಿಸಿಕೊಳ್ಳಬೇಕು ಎಂದರು.
ತಾಯಂದಿರಿಗೆ ಹೆರಿಗೆ ಸಮಯದಲ್ಲಿ ಉಂಟಾಗುವ ನೋವು ನಿಸರ್ಗ ಸಹಜ. ಈ ಸಂದರ್ಭ ತಾಳ್ಮೆಯೂ ಅಗತ್ಯ. ಮಗುವಿನ ಜನನದ ನಂತರ ನೋವು ಮರೆಯಾಗಿ ಮೂಡುವ ಸಂತಸ ಶಾಶ್ವತವಾಗಿರುತ್ತದೆ. ನಮ್ಮ ಪೂರ್ವಾಶ್ರಮದ ತಾಯಿಗೆ 14 ಮಕ್ಕಳು. ಆದರೂ ಅವರು 89 ವರ್ಷ ಆರೋಗ್ಯವಂತರಾಗಿ ಬಾಳಿದ್ದರು. ಹೊಸ ತಲೆಮಾರಿನ ಹೆಣ್ಣು ಮಕ್ಕಳು ಶ್ರಮ ರಹಿತ ಜೀವನ ಕ್ರಮದಿಂದ ಹೆಚ್ಚು ಅನಾರೋಗ್ಯಕ್ಕೀಡಾಗುತ್ತಿರುವುದು ವಿಷಾದಕರ ಸಂಗತಿ ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ಟಿ.ಎಚ್. ಆಂಜನಪ್ಪ ಮಾತನಾಡಿ, ಇಂದಿನ ಆಹಾರ ಪದ್ಧತಿಯಿಂದ ಆಯಸ್ಸು ಕಡಿಮೆಯಾಗುತ್ತಿದೆ. 120 ವರ್ಷ ಬದುಕುತ್ತಿದ್ದವರು 60 ವರ್ಷ ಜೀವಿಸುವುದೇ ಕಷ್ಟಕರವಾಗಿದೆ. ಆರೋಗ್ಯ ಪಾಲನೆಗೆ ಹೆಚ್ಚು ಗಮನ ನೀಡಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಯಲಾದಹಳ್ಳಿಯ ಮಳವಳ್ಳಿ ದೇವೇಗೌಡರ ಎತ್ತಿನ ಬಂಡಿ ಗಾಡಿಯಲ್ಲಿ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಮತ್ತು ಗಣ್ಯರನ್ನು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಜನರಕ್ಷಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ, ಲಯನ್ಸ್ ಜಿಲ್ಲಾ ಪ್ರಾಂತಪಾಲ
ಕೆ.ಎಲ್. ರಾಜಶೇಖರ, ಪ್ರಾಂತೀಯ ಅಧ್ಯಕ್ಷ ಟಿ.ಆರ್.ಸೋಮೇಗೌಡ, ಸ್ಫೂರ್ತಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಎಲ್.ಶಿವರಾಮು, ಬೋರೇಗೌಡ, ಚಂದ್ರಶೇಖರ್, ಕೆಂಗಲ್‌ಗೌಡ, ಸೋಮೇಗೌಡ, ಸಿದ್ದೇಗೌಡ, ಪಿಡಿಒ ಸುಧಾ, ಲೀಲಾ ರಾಮೇಗೌಡ ಸೇರಿದಂತೆ ಮತ್ತಿತರಿದ್ದರು.