ಮಂಡ್ಯ ತಾಲೂಕು ಕೀಲಾರ ಗ್ರಾಮಕ್ಕೆ ಆಗಮಿಸಿದ ವೇಳೆ ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಪುತ್ಥಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಲಾರ್ಪಣೆ ಮಾಡಿದರು.
- ಕೀಲಾರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆ
- ಮೇಘಾ ಟ್ರಾವೆಲ್ಸ್ನ ತಿಮ್ಮೇಗೌಡರು ಕೊಡುಗೆಯಾಗಿ ನೀಡಿರುವ ಬಸ್
ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡರು ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅದರಲ್ಲೂ ಜನರ ಪ್ರೀತಿ ವಿಶ್ವಾಸದಿಂದ ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ಕೊಡಲು ಜಿಲ್ಲೆಗೆ ಅವರ ಕೊಡುಗೆ ಅಪಾರ. ಜತೆಗೆ ಈ ದೇಶದ ಬೆನ್ನೆಲುಬು ರೈತನ ಬದುಕಿನ ಬಗ್ಗೆ ಚಿಂತನೆ ಮಾಡಿದರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದರು.
ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಮೇಘಾ ಟ್ರಾವೆಲ್ಸ್ನ ತಿಮ್ಮೇಗೌಡರು ಕೊಡುಗೆಯಾಗಿ ನೀಡಿರುವ ಬಸ್ ಅನ್ನು ಹಸ್ತಾಂತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆ.ವಿ.ಶಂಕರಗೌಡರು ಬುನಾದಿ ಹಾಕಿರುವ ಕೀಲಾರ ಸರ್ಕಾರಿ ಶಾಲೆಯನ್ನು ಹಲವಾರು ದಾನಿಗಳ ಸಹಕಾರದಿಂದ ಅಭಿವೃದ್ಧಿಪಡಿಸಬೇಕು ಎಂದರು.
ಜನ್ಮ ಕೊಟ್ಟ ತಂದೆ ಮತ್ತು ತಾಯಿ, ಸಹೋದರ ಮತ್ತು ಸಹೋದರಿ ಎನ್ನುವುದು ಕ್ಷುಲ್ಲಕ ಕಾರಣಕ್ಕೆ ನಶಿಸಿ ಹೋಗುತ್ತಿವೆ. ಹಿಂದೆ ಕುಟುಂಬದಲ್ಲಿ 20 ಜನ ಒಟ್ಟೊಟ್ಟಿಗೆ ಕುಳಿತು ಊಟ ಮಾಡುತ್ತಿದ್ದ ದಿನಗಳು ಇಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಶಕ್ತಿ, ಸೌಲಭ್ಯ ರಸ್ತೆ ಇರಲಿಲ್ಲ. ಆದರೂ ಕುಟುಂಬದಲ್ಲಿ ಅನ್ಯೋನ್ಯತೆ ಜತೆಗೆ ನೆಮ್ಮದಿ ಇತ್ತು ಎಂದು ಹೇಳಿದರು.
ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುವ ಶಾಲೆಗಳಿಗೆ ಬಸ್‌ನ ವ್ಯವಸ್ಥೆ ಮಾಡುತ್ತೇನೆ. ಅದೇ ರೀತಿ ವಿದ್ಯಾರ್ಥಿಗಳು ಕಡಿಮೆ ಅಂಕ ಬಂದರೆ ಬೇರೆ ಪ್ರಭಾವಕ್ಕೆ ಒಳಗಾಗದಿರಿ. ನಮ್ಮಲ್ಲಿ ಹಲವಾರು ಪ್ರತಿಭೆ ಶಕ್ತಿಗಳು ಇವೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಕಡಿಮೆ ಅಂಕ ಪಡೆದವರೇ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಪಾಲಕರಿಗೆ ಶಿಸ್ತು ಬದ್ಧವಾಗಿ ಇದ್ದು, ಗೌರವ ಬರುವ ರೀತಿ ನಡೆದುಕೊಳ್ಳಿ. ಭಾರತ ವಿಶ್ವದಲ್ಲಿ ಬೆಳೆಯುತ್ತಿದೆ ಎಂದುಕೊಂಡಿದ್ದೇವೆ. ಆದರೆ ನಿಜವಾದ ಭಾರತ ನೋಡಬೇಕಾದರೆ ಹಳ್ಳಿಗೆ ಬರಬೇಕು. ಜನಗಳ ಮೇಲೆ ನನಗೆ ನಂಬಿಕೆ ಇದೆ. ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ರೈತರ ಬದುಕು ಎಷ್ಟು ಕಷ್ಟದಲ್ಲಿದೆ ಎನ್ನುವುದು ನನಗೆ ಗೊತ್ತು. ನಾನು ಬದುಕಿರುವವರೆಗೂ ನಿಮ್ಮ ಕಷ್ಟ ಸುಖದಲ್ಲಿರುತ್ತೇನೆ. ನೀವುಗಳು ರಾಜಕಾರಣವನ್ನು ಚುನಾವಣೆ ಸಮಯದಲ್ಲಿ ಮಾಡಿ, ಉಳಿದ ಸಮಯದಲ್ಲಿ ಒಗ್ಗಟ್ಟಾಗಿರಿ ಎಂದು ಹೇಳಿದರು.
ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಯುವ ನಾಯಕ ಕೆ.ಎಸ್.ವಿಜಯಾನಂದ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಮೇಘಾ ಟ್ರಾವೆಲ್ಸ್ನ ತಿಮ್ಮೇಗೌಡ, ತಾಪಂ ಮಾಜಿ ಸದಸ್ಯ ತಿಮ್ಮೇಗೌಡ, ಅಮರಾವತಿ ಚಂದ್ರಶೇಖರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಮುಖಂಡ ಕೆ.ಆರ್.ರಮೇಶ್ ಇತರರಿದ್ದರು.