ಮಳವಳ್ಳಿ ತಾಲೂಕಿನ ಜನಗಹಳ್ಳಿ ಗುಡ್ಡದ ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸುಟ್ಟು ಕರಕಲಾದ ಸ್ಥಿಯಲ್ಲಿ ಕಂಡುಬಂದ ಯುವತಿಯ ಕಳೇಬರ. 
ಮಂಡ್ಯ

ಸುಟ್ಟ ಸ್ಥಿತಿಯಲ್ಲಿ ಯುವತಿಯ ಕಳೇಬರ ಪತ್ತೆ

ಮಳವಳ್ಳಿ: ತಾಲೂಕಿನ ಕೊಳ್ಳೇಗಾಲ ಬೈಪಾಸ್ ರಸ್ತೆಯ ಜವನಗಹಳ್ಳಿ ಗುಡ್ಡದ ಬಳಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟಿರುವ ಯುವತಿಯೊಬ್ಬಳ ಕಳೇಬರ ಬುಧವಾರ ರಾತ್ರಿ ಪತ್ತೆಯಾಗಿದೆ.
ಜವನಗಹಳ್ಳಿ ಗುಡ್ಡದ ನಿರ್ಜನ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸರಕು ತುಂಬಿಸಿಕೊಂಡು ತೆರಳುತ್ತಿದ್ದ ಲಾರಿ ಚಾಲಕ ರಸ್ತೆ ಬದಿಗೆ ಮೂತ್ರ ವಿಸರ್ಜನೆ ತೆರಳಿದಾಗ, ಮೊಬೈಲ್ ಟಾರ್ಚ್ ಆನ್ ಮಾಡಿದ್ದರಿಂದ ಸುಟ್ಟ ಸ್ಥಿತಿಯಲ್ಲಿ ಕಳೇಬರ ಕಂಡು ಬಂದಿದೆ. ಆತಂಕಗೊಂಡು ಲಾರಿಯನ್ನು ಸ್ವಲ್ಪ ದೂರ ಚಾಲನೆ ಮಾಡಿಕೊಂಡು ಬಂದ ನಂತರ, 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಲಾರಿ ಚಾಲಕನ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು, ಪರಿಶೀಲನೆ ನಡೆಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.
ಸುಮಾರು 2-3 ದಿನಗಳ ಹಿಂದೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಂಪೂರ್ಣ ಸುಟ್ಟು ಹೋಗಿದ್ದ ಕಳೇಬರದಲ್ಲಿ ದೊರೆತಿರುವ ವಾಚ್, ಉಂಗುರ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು, ಮಹಜರ್ ನಡೆಸಿರುವ ಬೆಳಕವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಡಾ.ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.