ಪಾಂಡವಪುರ ತಾಲೂಕಿನ ಬೇಬಿಗ್ರಾಮದ ಶ್ರೀ ದುದರ್ಂಡೇಶ್ವರ ಮಠದ ಡಿಎಂಎಸ್ ಜ್ಞಾನಕುಟೀರ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡೋತ್ಸವವನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಜಿ.ಎ.ಲೋಕೇಶ್ ಇತರರು ಇದ್ದರು. 
ಮಂಡ್ಯ

ದೈಹಿಕ, ಮಾನಸಿಕ ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿಯ ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
  • ಬೇಬಿಗ್ರಾಮದ ಶ್ರೀ ದುದರ್ಂಡೇಶ್ವರ ಮಠದ ಡಿಎಂಎಸ್ ಜ್ಞಾನಕುಟೀರ ಹಿಪ್ಪೋಕ್ಯಾಂಪಸ್ ಶಾಲೆ
ಪಾಂಡವಪುರ: ಸದೃಢ ಸಮಾಜ ನಿರ್ಮಾಣಕ್ಕೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ ಎಂದು ಬೆಳಗಾವಿಯ ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಬೇಬಿಗ್ರಾಮದ ಶ್ರೀ ದುದರ್ಂಡೇಶ್ವರ ಮಠದ ಡಿಎಂಎಸ್ ಜ್ಞಾನಕುಟೀರ ಹಿಪ್ಪೋಕ್ಯಾಂಪಸ್ ಶಾಲೆಯಲ್ಲಿ ಲಿಂಗೈಕ್ಯ ಶ್ರೀ ಮರೀದೇವರು ಸ್ವಾಮೀಜಿಯ 132ನೇ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಶಾಲಾ ಮಕ್ಕಳ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು. ಉತ್ತಮ ಆಹಾರ ಸೇವನೆ ಮತ್ತು ಕ್ರೀಡಾಚಟುವಟಿಕೆಯಿಂದ ಮಕ್ಕಳು ಉತ್ತಮ ಆರೋಗ್ಯ ಹೊಂದಬಹುದು. ಹೀಗಾಗಿ ಪಾಲಕರು ಮಕ್ಕಳಿಗೆ ಉತ್ತಮ ಆಹಾರವನ್ನೇ ನೀಡಬೇಕು. ಜತೆಗೆ ಮಕ್ಕಳು ನಿರಂತವಾಗಿ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಮರೀದೇವರು ಸ್ವಾಮೀಜಿ ಈ ಭಾಗದಲ್ಲಿ ಆದರ್ಶ ಬದುಕು ನಡೆಸಿದ ಮಹಾನ್ ಚೇತನ. ತಮ್ಮ ಬದುಕಿನುದ್ದಕ್ಕೂ ಮತ್ತೊಬ್ಬರಿಗೆ ಪ್ರೇರಣೆಯಾಗಿದ್ದವರು. ಶ್ರೀಗಳು 105 ವರ್ಷ ಬದಕಿದ್ದರು ಎಂದರೆ ಆರೋಗ್ಯದಿಂದ ಮಾತ್ರ ಇದು ಸಾಧ್ಯವಾಗಿದೆ. ಆರೋಗ್ಯ ಎಂಬುದು ಬಹಳ ಮುಖ್ಯವಾಗಿರುವುದರಿಂದ ಮಕ್ಕಳು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಯಂತ್ಯುತ್ಸವಗಳು ನಡೆಯಲಿ ಎಂದರು.
ಮಠದ ಪೀಠಾಧ್ಯಕ್ಷ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಡಿಎಂಎಸ್ ಶಾಲೆ ಮಕ್ಕಳನ್ನು ದೇಶದ ಬಹುದೊಡ್ಡ ಆಸ್ತಿಯನ್ನಾಗಿ ಮಾಡಬೇಕು ಎಂಬ ಕನಸು ಹೊತ್ತಿಕೊಂಡು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಆ ನಿಟ್ಟಿನಲ್ಲಿ ಶಿಕ್ಷಕರೂ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ಬೇಬಿ ಗ್ರಾಮದ ದುದರ್ಂಡೇಶ್ವರ ಮಠ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ. ಒಂದಲ್ಲ ಒಂದು ಸಾಮಾಜಿಕ ಸೇವೆ ಮಾಡಿಕೊಂಡು ಬರುತ್ತಿದೆ. ಸಮಾಜಕ್ಕೆ ಮಾರಕವಾಗಿರುವ ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖವಾದ ಪಾತ್ರವಹಿಸುತ್ತಿದ್ದು, ಅದಕ್ಕಾಗಿ ಮಠದ ವತಿಯಿಂದ ಅವರಿಗೆ ಮಡಿಲು ಅಕ್ಕಿ ವಿತರಣೆ ಮಾಡಲಾಗುವುದು ಎಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎ.ಲೋಕೇಶ್ ಮಾತನಾಡಿ, ಮಕ್ಕಳು ಆರೋಗ್ಯ ಮತ್ತು ಕ್ರೀಡೆಯನ್ನು ಜತೆಯಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ಉತ್ತಮ ಆರೋಗ್ಯ ಇರುವ ಕಡೆ ಒಳ್ಳೆಯ ಮನಸ್ಸು ಇರುತ್ತದೆ. ಇದಕ್ಕೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಮಕ್ಕಳು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಜತೆಗೆ ಏಕಾಗ್ರತೆ ಹೆಚ್ಚುತ್ತದೆ. ಏಕಾಗ್ರತೆ ಇರುವ ಕಡೆ ಕಲಿಕೆಗೆ ನೆರವಾಗುತ್ತದೆ. ಹಾಗಾಗಿ ಶಾಲಾ ಹಂತದಲ್ಲಿ ನಡೆಯುವ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು.
ಜಗತ್ತಿನಲ್ಲಿ ಯಾವ ಮಕ್ಕಳೂ ದಡ್ಡರಲ್ಲ. ಪ್ರತಿ ಮಗವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು. ಮಕ್ಕಳಲ್ಲಿರುವ ಪ್ರತಿಭೆ ಎಂತಹದ್ದು ಎಂದು ಅವರ ತಾಯಿಂದಿರಿಗೆ ತಿಳಿದಿರುತ್ತದೆ. ಪಾಲಕರು ಮನೆಯಲ್ಲಿ, ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬಳಿಕ ಮಕ್ಕಳಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರವಿಕುಮಾರ್, ಶಿಕ್ಷಣ ಮತ್ತು ಉಪನಿದೇರ್ಶಕ ಯೋಗೇಶ್, ಅಂತಾರಾಷ್ಟೀಯ ಹ್ಯಾಂಡ್ ಬಾಲ್ ತರಬೇತುದಾರ ಉದಯ್‌ಕುಮಾರ್, ಚಂದ್ರವನ ಅಶ್ರಮ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಹಿಪ್ಪೊಕ್ಯಾಂಪಸ್ ನಿದೇರ್ಶಕಿ ರೂಪ, ಜ್ಞಾನ ಕುಟೀರ ಕಾರ್ಯದರ್ಶಿಗಳಾದ ಸುಮ, ಕಾರ್ಯದರ್ಶಿ ಹೊನ್ನಪ್ಪ, ಗ್ರಾ.ಪಂ ಅಧ್ಯಕ್ಷೆ ಮಂಗಳಮ್ಮ, ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ, ಚಂದ್ರವನ ಆಶ್ರಮ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇತರರು ಇದ್ದರು.