ಸ್ವದೇಶಿ ವಸ್ತು ಬಳಸಿ ದೇಶ ಉಳಿಸಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ತಾಲೂಕಿನ ಸೋಮನಹಳ್ಳಿ ಸಿಪಾಯಿ ಹೋಟೆಲ್ ಬಳಿ ಆಗಮಿಸಿದಾಗ ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ನೇತೃತ್ವದಲ್ಲಿ ಸಾರ್ವಜನಿಕರು ಪುಷ್ಪಾರ್ಚನೆ ಮೂಲಕ ಅದ್ದೂರಿ ಸ್ವಾಗತಿಸಿದರು. ಎವಿಕೆ ಮೋಹನ್, ರಮೇಶ್‌ನರಸಯ್ಯ, ವೇದಮೂರ್ತಿ, ಮೀರಾರಾಮ್ ನಾರಾಯಣ್, ಮಿತ್ರಶೆಣೈ, ಅಶೊಕ ಗುಲಾಟಿ, ಕರ್ನಲ್‌ಕಂದಸ್ವಾಮಿ ಇದ್ದರು. 
ಮಂಡ್ಯ

ಸ್ವದೇಶಿ ವಸ್ತು ಬಳಸಿದಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಬ್ರಿಗೇಡಿಯರ್ ಮಾಜಿ ಸೈನಿಕ ರವಿ ಮುನಿಸ್ವಾಮಿ ಅಭಿಮತ
ಮದ್ದೂರು : ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳನ್ನು ಉತ್ಪಾದಿಸಿ, ಬಳಸಿದರೆ ಭಾರತ ಸ್ವಾವಲಂಬಿ ಮತ್ತು ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬ್ರಿಗೇಡಿಯರ್ ಮಾಜಿ ಸೈನಿಕ ರವಿ ಮುನಿಸ್ವಾಮಿ ಅಭಿಪ್ರಾಯಪಟ್ಟರು.
ಸ್ವದೇಶಿ ವಸ್ತು ಬಳಸಿ ದೇಶ ಉಳಿಸಿ ಅಭಿಯಾನದ ಅಂಗವಾಗಿ ಮಾಜಿ ಯೋಧರು, ನಿವೃತ್ತ ಕೆಎಎಸ್, ಐಎಎಸ್ ಅಧಿಕಾರಿಗಳು ಹಾಗೂ ಇನ್ನಿತರ ಸಂಘಟನೆಗಳ ವತಿಯಿಂದ ಬೆಂಗಳೂರಿನಿಂದ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಶನಿವಾರ ತಾಲೂಕಿನ ಸೋಮನಹಳ್ಳಿ ಸಿಪಾಯಿ ಹೋಟೆಲ್ ಬಳಿ ಆಗಮಿಸಿದಾಗ ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ನೇತೃತ್ವದಲ್ಲಿ ಸಾರ್ವಜನಿಕರು ಪುಷ್ಪಾರ್ಚನೆ ಮೂಲಕ ಅದ್ದೂರಿ ಸ್ವಾಗತ ಸ್ವೀಕರಿಸಿದ ಬಳಿಕ ಮಾತನಾಡಿದರು.
ಪ್ರಧಾನಿ ಮೋದಿ ಅವರು ದೇಶವನ್ನು ವಿಶ್ವಗುರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ, ಅವರು ದೇಶದ ಸೈನಿಕರು, ರೈತರು ಹಾಗೂ ಬಡವರಿಗೆ ನಿರಂತರವಾಗಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಾ ದೇಶ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸ್ವದೇಶಿ ದೇಶಪ್ರೇಮ ಹಾಗೂ ರಾಷ್ಟ್ರಭಕ್ತಿಗೆ ಬೇರೆ ಹೋಲಿಕೆಯಿಲ್ಲ. ಸ್ವಾತಂತ್ರ್ಯ, ಸ್ವಾಭಿಮಾನ ಆರ್ಥಿಕ ಶಕ್ತಿಯನ್ನು ಬಲಪಡಿಸುವುದಾಗಿದೆ. ಸ್ವದೇಶಿಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ರೀತಿಯ ಜಾಥಾಗಳನ್ನು ನಡೆಸಿ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದ್ದು, ಹೀಗಾಗಿ ನಮ್ಮ ತಂಡ 37 ದಿನಗಳ ಕಾಲ ಜಾಥಾವನ್ನು ಕೈಗೊಂಡಿದ್ದು, ಇದರಲ್ಲಿ 3 ಮಹಿಳೆಯರು, 13 ಪುರುಷರನ್ನು ಒಳಗೊಂಡು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಜನವರಿ 20ಕ್ಕೆ ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ ಎಂದು ಬ್ರಿಗೇಡಿಯರ್ ಮಾಜಿ ಸೈನಿಕ ರವಿ ಮುನಿಸ್ವಾಮಿ ತಿಳಿಸಿದರು.
ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ಮಾತನಾಡಿ, ಭಾರತ ಸಾಹಿತ್ಯ, ಸಂಸ್ಕೃತಿಗಳ ತವರೂರು, ಪ್ರತಿಭಾವಂತರ ನೆಲೆಬೀಡು. ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಏನು ಬೇಕೋ ಅವೆಲ್ಲವೂ ಇಲ್ಲಿ ಲಭ್ಯವಿವೆ. ಆದರೆ ಅದರ ಬಳಕೆ ಸಮರ್ಪಕವಾಗದೆ ಎಲ್ಲವೂ ನಶಿಸುತ್ತಾ ಸಾಗಿವೆ. ಇದನ್ನರಿತ ವಿದೇಶಿ ಕಂಪನಿಗಳು ಭಾರತದಿಂದಲೇ ಕಚ್ಚಾವಸ್ತುಗಳನ್ನು ಪಡೆದು ಸಿದ್ಧ ವಸ್ತುಗಳನ್ನು ತಯಾರಿಸಿ, ಇಲ್ಲಿಗೆ ತಂದು ಮಾರುತ್ತಿವೆ. ಆದರೆ ಹೆಸರು ಮಾತ್ರ ವಿದೇಶದ್ದು. ನಮ್ಮ ಜನ ಇಂತಹ ವಸ್ತುಗಳಿಗೆ ಮಾರು ಹೋಗಿ ಅದರ ಬೆಲೆಯನ್ನು ಲೆಕ್ಕಿಸದೇ ಖರೀದಿಸುತ್ತಾರೆ. ಇದರ ಫಲವೇ ನಿರುದ್ಯೋಗದ ಸಮಸ್ಯೆಯಾಗಿದೆ ಎಂದರು.
ಸ್ಥಳೀಯವಾಗಿ ಲಭ್ಯವಾಗುವ ವಸ್ತುಗಳನ್ನು ಸರಿಯಾಗಿ ಬಳಸಿಕೊಂಡರೆ ಕೆಲವೇ ವರ್ಷಗಳಲ್ಲಿ ಭಾರತ ಸದೃಢ, ಸ್ವಾಭಿಮಾನಿ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂಬುದನ್ನು ನಮ್ಮ ಯುವಜನ ಅರಿಯಬೇಕಿದೆ ಎಂದು ಹೇಳಿದರು.
ಮಾಜಿ ಮೇಜರ್ ಜನರಲ್‌ಗಳಾದ ಎವಿಕೆ ಮೋಹನ್, ರಮೇಶ್ ನರಸಯ್ಯ, ಮಾಜಿ ಸೈನಿಕರಾದ ವೇದಮೂರ್ತಿ, ಮೀರಾರಾಮ್ ನಾರಾಯಣ್, ಮಿತ್ರಶೆಣೈ, ಅಶೋಕ ಗುಲಾಟಿ, ಕರ್ನಲ್ ಕಂದಸ್ವಾಮಿ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲರಾಜು, ಮಾಜಿ ಸೈನಿಕರಾದ ಸಿಪಾಯಿ ಶ್ರೀನಿವಾಸ್, ಚೌಡೇಗೌಡ, ಶಿವಲಿಂಗಯ್ಯ, ಬಸವರಾಜು, ವೆಂಕಟರಾಮು, ಕೆ.ಟಿ.ಚಂದ್ರು, ಸುರೇಶ್, ಪ್ರತಾಪ್, ಎಂ.ಶ್ರೀನಿವಾಸ್, ಗ್ರಾಪಂ ಸದಸ್ಯ ಪ್ರೀತಂ ಮತ್ತಿತರಿದ್ದರು.