ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಪ್ರಮೀಳಾ ವೀರಪ್ಪ ಪ್ರೌಢಶಾಲೆಗೆ ರೋಟರಿ ವತಿಯಿಂದ ಎಲ್‌ಇಡಿ ಬೋರ್ಡ್ ಮತ್ತು ಸ್ಟೂಡೆಂಟ್ ಡೆಸ್ಕ್ ವಿತರಿಸುವ ಕಾರ್ಯಕ್ರಮವನ್ನು ರೋಟರಿ ಜಿಲಾ ಪ್ರಾಂತಪಾಲ ಪ್ರೊ.ಎಲಿಜಬತ್ ಚೆರಿಯನ್ ಉದ್ಘಾಟಿಸಿದರು. ಎಸ್.ಪಿ.ಶ್ರೀನಿವಾಸ್, ಆನಂದ್ ಬಿಂದಗಿ, ನವೀನ್ ಕಾರಿಯಪ್ಪ, ತಿಪ್ಪೂರು ರಾಜೇಶ್, ಬಿ.ಡಿ.ಹೊನ್ನೇಗೌಡ ಇತರರು ಇದ್ದರು. 
ಮಂಡ್ಯ

ಕಠಿಣ ಪರಿಶ್ರಮದಿಂದ ಉತ್ತಮ ಜೀವನ ರೂಪಿಸಿಕೊಳ್ಳಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ರೋಟರಿ ಜಿಲ್ಲಾ ಪ್ರಾಂತಪಾಲ ಪ್ರೊ.ಎಲಿಜಬತ್ ಚೆರಿಯನ್ ಸಲಹೆ
  • ಎಲ್‌ಇಡಿ ಬೋರ್ಡ್ ಮತ್ತು ಸ್ಟೂಡೆಂಟ್ ಡೆಸ್ಕ್ ವಿತರಣೆ
ಮದ್ದೂರು: ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ರೋಟರಿ ಸಂಸ್ಥೆ ಹಲವು ಅನುಕೂಲಗಳನ್ನು ಕಲ್ಪಿಸುತ್ತಿದ್ದು, ಇದರ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಪ್ರೊ.ಎಲಿಜಬತ್ ಚೆರಿಯನ್ ತಿಳಿಸಿದರು.
ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಪ್ರಮೀಳಾ ವೀರಪ್ಪ ಪ್ರೌಢಶಾಲೆಗೆ ಇತ್ತೀಚೆಗೆ ರೋಟರಿ ವತಿಯಿಂದ ಎಲ್‌ಇಡಿ ಬೋರ್ಡ್ ಮತ್ತು ಸ್ಟೂಡೆಂಟ್ ಡೆಸ್ಕ್ ವಿತರಿಸಿ ಮಾತನಾಡಿದರು.
ವಿದ್ಯೆ ಯಾರೂ ಕದಿಯಲಾಗದ್ದು, ವಿದ್ಯೆಗಿರುವ ಮಹತ್ವ ಮತ್ತು ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಉತ್ತಮ ಶಿಕ್ಷಣ ಪಡೆದುಕೊಂಡರೆ ನಿಮ್ಮ ಭವಿಷ್ಯ ಉಜ್ವಲಗೊಳ್ಳುತ್ತದೆ. ಇದನ್ನು ಅರಿತು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ರೋಟರಿ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಮಾತನಾಡಿ, ರೋಟರಿ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬಾಳಿಗೆ ಆಸರೆಯಾಗಿದೆ. ರೋಟರಿ ವತಿಯಿಂದ ಮುಂದೆಯೂ ಇನ್ನು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದ್ದು, ಎಲ್ಲ ವರ್ಗದ ಜನರಿಗೂ ಅನುಕೂಲ ಕಲ್ಪಿಸಲಾಗುವುದು ಎಂದರು.
ನಾನು ವ್ಯಾಸಂಗ ಮಾಡಿದ ಪ್ರಮೀಳಾ ವೀರಪ್ಪ ಶಾಲೆಯ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕ್ಲಾಸ್‌ಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಲ್‌ಇಡಿ ಬೋರ್ಡ್, ಸ್ಟೂಡೆಂಟ್ ಡೆಸ್ಕ್ ಸೇರಿದಂತೆ ಇನ್ನಿತರ ಪರಿಕರಗಳನ್ನು ರೋಟರಿ ವತಿಯಿಂದ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.
ರೋಟರಿ ಕ್ಲಬ್ ಪ್ರಾಜೆಕ್ಟ್ ಚೇರ್‌ನ ಆನಂದಬಿಂದಗಿ ಮಾತನಾಡಿ, ರೋಟರಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪಠ್ಯ ವಸ್ತುಗಳು, ಸೈಕಲ್‌ಗಳು, ಕನ್ನಡ ಮತ್ತು ಇಂಗ್ಲಿಷ್ ನಿಘಂಟು ವಿತರಣೆ, ಶುದ್ಧ ಕುಡಿಯುವ ನೀರಿನ ಯಂತ್ರ (ವಾಟರ್ ಫಿಲ್ಟರ್) ಸೇರಿದಂತೆ ಹಲವಾರು ರೀತಿಯ ಸೌಲಭ್ಯಗಳನನು ತಾಲೂಕಿನ ವಿವಿಧ ಶಾಲೆಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಶಾಲಾ ಆವರಣದಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಮತ್ತು ಕಾನ್ಫರೆನ್ಸ್ ಚೇರ್ ನವೀನ್ ಕಾರಿಯಪ್ಪ, ಜಿಲ್ಲಾ ಕಾರ್ಯದರ್ಶಿಗಳು ಬಿ.ಡಿ.ಹೊನ್ನೇಗೌಡ, ಜಿಲ್ಲಾ ರಾಯಭಾರಿ ತಿಪ್ಪೂರು ಟಿ.ಎಸ್.ರಾಜೇಶ್, ಪದಾಧಿಕಾರಿಗಳಾದ ಅನುಪಮ, ಅಕ್ಷರಂ ವೆಂಕಟೇಶ್, ವಿ.ಕೆ.ರಾಧಾ, ಬಿ.ಸಿ.ಯೋಗೇಶ್, ಜಿ.ಸಿ.ಶಶಿಕುಮಾರ್, ಪ್ರಮೀಳಾ ವೀರಪ್ಪ ಪ್ರೌಢಶಾಲೆ ಟ್ರಸ್ಟಿ ಸತೀಶ್ ಸೇರಿದಂತೆ ಇತರರು ಇದ್ದರು.