ಮಂಡ್ಯದಲ್ಲಿ ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಬೂದನೂರು ಉತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಫೆ.21, 22ರಂದು ಬೂದನೂರು ಉತ್ಸವ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿಯಲ್ಲಿ ಎರಡು ದಿನ ಬೂದನೂರು ಉತ್ಸವ
  • ಸ್ಥಳೀಯ ಕಲಾವಿದರಿಗೆ ಆದ್ಯತೆ
  • ಗ್ರಾಮೀಣ ಕ್ರೀಡಾಕೂಟ ಆಯೋಜನೆ
ಮಂಡ್ಯ: ತಾಲೂಕಿನ ಬೂದನೂರು ಗ್ರಾಮದ ಕಾಶಿವಿಶ್ವನಾಥಸ್ವಾಮಿ ಹಾಗೂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಆವರಣದಲ್ಲಿ ಫೆ.21 ಮತ್ತು 22ರಂದು ಬೂದನೂರು ಉತ್ಸವ ಆಚರಣೆವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024ರಲ್ಲಿ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದರಿಂದ 2025ನೇ ಸಾಲಿನಲ್ಲಿ ಬೂದನೂರು ಉತ್ಸವ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಬೂದನೂರು ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಹೇಳಿದರು.
ಉತ್ಸವದ ಕಾರ್ಯಗಳು ಪ್ರಾರಂಭವಾಗಲಿ. ಉತ್ಸವ ನಡೆಯುವ ಸ್ಥಳ ಸ್ವಚ್ಛಗೊಳಿಸಿ. ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆಯೋಜಿಸಲಾಗಿರುವ ಉತ್ಸವ. ಇದರಲ್ಲಿ ಯಾವುದೇ ರಾಜಕೀಯ ಬೇಡ. ಎಲ್ಲರೂ ಒಗ್ಗಟ್ಟಾಗಿ ಉತ್ಸವ ಆಚರಣೆ ಮಾಡೋಣ. ವೇದಿಕೆ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ವಿವಿಧ ಸಮಿತಿ ರಚಿಸಿ ಉತ್ಸವದ ಆಚರಣೆ ಪೂರ್ವ ಸಿದ್ಧತಾ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥದ ಮಾದರಿಯಂತೆ ಬೂದನೂರಿನ ಕಾಶಿವಿಶ್ವನಾಥಸ್ವಾಮಿ ಹಾಗೂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಇತಿಹಾಸ ಸಾರುವ ಟ್ಯಾಬ್ಲೊ ನಿರ್ಮಾಣ ಮಾಡಿ. ಅಂತೆಯೇ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಟ್ಯಾಬ್ಲೊ ಮೆರವಣಿಗೆ ಮಾಡುವ ಮೂಲಕ ಉತ್ಸವ ಆಚರಣೆ ಮಾಡಲಾಗುವುದು. ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಹಾಗಾಗಿ ಜಿಲ್ಲೆಯ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಬೂದನೂರು ಉತ್ಸವದ ಅಂಗವಾಗಿ ಕಬಡ್ಡಿ, ಮಡಿಕೆ ಹೊಡೆಯುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚಿತ್ರ ಕಲೆ ಸ್ಪರ್ಧೆ ಸೇರಿದಂತೆ ಇನ್ನಿತರ ಗ್ರಾಮೀಣ ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಶಾಸಕ ರವಿಕುಮಾರ್ ಅವರು ಉತ್ಸವವನ್ನು ಈಗಾಗಲೇ ಬೂದನೂರಿನಲ್ಲಿ ಆಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಈ ವರ್ಷವೂ ಸಹ ಬೂದನೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಉತ್ಸವದ ನಡೆಯುವ ಸ್ಥಳದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ, ಶೌಚಗೃಹ ಕಲ್ಪಿಸಿ. ವಿವಿಧ ಮಳಿಗೆಗಳನ್ನು ತೆರೆಯಲಾಗುವುದು ಮತ್ತು ಆಹಾರ ಮೇಳವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಪಂ ಮಾಜಿ ಸದಸ್ಯ ಯೋಗೇಶ್ ಇತರರಿದ್ದರು.