ಘಟನ ಸ್ಥಳಕ್ಕೆ ಎಸ್ಪಿ ಡಾ.ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 
ಮಂಡ್ಯ

ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿ ಅಣ್ಣ,ತಂಗಿ ಸಾವು

ಪ್ರಮುಖ ಮುಖ್ಯಾಂಶಗಳು

  • ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
  • ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು
ನಾಗಮಂಗಲ : ಚಲಿಸುತ್ತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಣ್ಣ, ತಂಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. 
ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಬೇಗಮಂಗಲ ಅಂಚೆಭೂವನಹಳ್ಳಿ ನಡುವೆ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸಿ ರವೀಂದ್ರರಾಜ್ ಕೃಷ್ಣ ಅವರ ಮಕ್ಕಳಾದ ಶ್ಯಾಮ್ (21), ಮವೀನಾ(20) ಮೃತರು. ಘಟನೆಯಲ್ಲಿ ಹೀನಾಶ್ರೀ, ಕಲಾಶ್ರೀ ಹಾಗೂ ಕಾರು ಚಾಲಕ ಚೇತನ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಒಂದೇ ಕುಟುಂಬದ ಐವರು ತಾಲೂಕಿನ ಕೋಟೆಬೆಟ್ಟದಲ್ಲಿ ನಡೆಯುತ್ತಿದ್ದ ಜಾತ್ರಾಮಹೋತ್ಸವಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗಮಂಗಲ ಕಡೆಗೆ ಚಲಿಸುತ್ತಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡು ಮವೀನ ಹಾಗೂ ಶ್ಯಾಮ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಇವರ ತಾಯಿ ಹಾಗೂ ದೊಡ್ಡಮ್ಮ ಮತ್ತು ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು.
ಸ್ಥಳಕ್ಕಾಗಮಿಸಿದ ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ವೈ.ಎನ್.ರವಿಕುಮಾರ್ ಮತ್ತು ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ, ಕಾರಿನಲ್ಲಿ ಮೃತಪಟ್ಟಿದ್ದ ಮವೀನ ಹಾಗೂ ಶ್ಯಾಮ್ ಮೃತದೇಹಗಳನ್ನು ಇದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್ಪಿ ಬಿ.ಚಲುವರಾಜು, ಸಿಪಿಐ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆಯ ಪೊಲೀಸರು ಕಾರು ಮತ್ತು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವಹಿಸಿದ್ದಾರೆ.