ಮಂಡ್ಯ ನಗರದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
- ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆ
- ಡಿಸಿ ಕಚೇರಿ ಸಹಾಯಕ ಸೋಮಶೇಖರ್ ಅವರಿಗೆ ಮನವಿ ಸಲ್ಲಿಕೆ
ಮಂಡ್ಯ: ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ಬಲವಂತವಾಗಿ ಜನಿವಾರ ತೆಗೆಸಿದ ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾವಣೆಗೊಂಡ ಕಾರ್ಯಕರ್ತರು, ಜನಿವಾರ ಹಿಡಿದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಕಚೇರಿ ಸಹಾಯಕ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು. ಖಾಸಗಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಬಲವಂತವಾಗಿ ತೆಗೆಸಲಾಗಿದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆ ಉಂಟಾಗಿದೆ ಎಂದು ದೂರಿದರು.
ಜನಿವಾರ ಎಂಬುದು ಬ್ರಾಹ್ಮಣ ಸಮುದಾಯದವರಿಗೆ ಕೇವಲ ದಾರವಲ್ಲ. ಅದು ಧಾರ್ಮಿಕ ನಂಬಿಕೆ, ಸಂಸ್ಕೃತಿ, ಸಂಪ್ರದಾಯ, ಆಚರಣೆ ಹಾಗೂ ಆತ್ಮಗೌರವದ ಪ್ರತೀಕವಾಗಿದೆ. ಇಂತಹ ಧಾರ್ಮಿಕ ಗುರುತನ್ನು ಬಲವಂತವಾಗಿ ತೆಗೆಸುವುದು ಭಾರತದ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಗೌರವ ಹಾಗೂ ಮೂಲ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಂದ ಜನಿವಾರ ತೆಗೆದುಹಾಕುವಂತೆ ಒತ್ತಡ ಹೇರಿದ ಪರಿಣಾಮ ಕೆಲ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೆಲವರು ಪರೀಕ್ಷೆಯನ್ನು ಸಮರ್ಪಕವಾಗಿ ಬರೆಯಲು ಸಾಧ್ಯವಾಗಿಲ್ಲ ಎಂಬ ಮಾಹಿತಿಯೂ ಇದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಭವಿಷ್ಯ ಹಾಗೂ ವೃತ್ತಿ ಜೀವನದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಘಟನೆಯ ಹೊಣೆಗಾರಿಕೆಗೆ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು, ಪರೀಕ್ಷಾ ಮೇಲ್ವಿಚಾರಕರು, ಭದ್ರತಾ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ನ್ಯಾಯಸಮ್ಮತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಎಸ್‌ಐಟಿ ರಚಿಸಬೇಕು. ತಪ್ಪಿತಸ್ಥ ಸಿಬ್ಬಂದಿ ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಪರೀಕ್ಷೆ ಬರೆಯಲು ತೊಂದರೆ ಅನುಭವಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಕ್ರಮ ಒದಗಿಸಬೇಕು ಎಂದು ಆಗ್ರಹಿಸಿದರು.
ಸಿಇಟಿ ಘಟಕದ ಆಯುಕ್ತರನ್ನು ಅಮಾನತು ಮಾಡಿ, ಜವಾಬ್ದಾರಿಯುತ ಹೊಸ ಅಧಿಕಾರಿಯನ್ನು ನೇಮಕ ಮಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಗುರುತು, ಸಂಸ್ಕೃತಿ ಅಥವಾ ವೈಯಕ್ತಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಪ್ರಕರಣದ ತನಿಖಾ ವರದಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ಶ್ರೀಪತಿ ಭಾರದ್ವಾಜ್, ಉಪಾಧ್ಯಕ್ಷೆ ಎಸ್.ಜಿ.ಭಾರತೀಬಾಬು, ಕಾರ್ಯದರ್ಶಿ ನಾಗಸುಂದರ್, ಮಹಿಳಾಧ್ಯಕ್ಷೆ ಮಮತಾ, ಕಾರ್ಯದರ್ಶಿ ವೀಣಾ, ಮುಖಂಡರಾದ ಶಶಿಕುಮಾರ್, ಚೇತಕ್, ಕೆ.ಆರ್.ಬಾಲಾಜಿ, ಮಂಜುನಾಥ್, ಹರ್ಷ, ಉಷಾ, ನಾಗರಾಜು, ಪ್ರಕಾಶ್‌ಮೂರ್ತಿ, ಗೋಪಿನಾಥ್ ಇತರರಿದ್ದರು.