ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮನವಿ ಸಲ್ಲಿಸಿದರು. 
ಮಂಡ್ಯ

ಬಿಪಿಎಲ್ ಕಾರ್ಡ್ ಸಮಸ್ಯೆ ಸರಿಪಡಿಸಿ: ಉಸ್ತುವಾರಿ ಸಚಿವರಿಗೆ ಕಕಜವೇ ಮನವಿ ಸಲ್ಲಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಆದಾಯ ತೆರಿಗೆ ಪಾವತಿ ನೆಪ
  • ಎಪಿಎಲ್ ಕಾರ್ಡ್ ಗೆ ಬದಲಾಗುತ್ತಿರುವ ಬಿಪಿಎಲ್
  • ಸಮಸ್ಯೆ ಸರಿಪಡಿಸುವಂತೆ ಮನವಿ ಸಲ್ಲಿಕೆ
ಮಂಡ್ಯ: ಆದಾಯ ತೆರಿಗೆ ತೆರಿಗೆ ನೆಪದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನ ರದ್ದುಗೊಳಿಸಿ ಎಪಿಎಲ್ಗೆ ಬದಲಿಸುತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಕ್ರಮ ಖಂಡಿಸಿ ಹಾಗೂ ಈ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಸರ್‌ಎಂವಿ ಒಳಾಂಗಣ ಕ್ರೀಡಾಂಗಣದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಆಹಾರ ಇಲಾಖೆ ಅಧಿಕಾರಿಗಳು ಆದಾಯ ತೆರಿಗೆ ನೆಪದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವುದರಿಂದ ಬಡ ಕುಟುಂಬಗಳಿಗೆ ಹಲವು ರೀತಿಯ ಸಮಸ್ಯೆ ಉಂಟಾಗುತ್ತಿದೆ. ಗ್ರಾಮಾಂತರ ಪ್ರದೇಶದ ಬಹುತೇಕ ಯುವಕರು ಖಾಸಗಿ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ನಾಲ್ಕು ಚಕ್ರದ ವಾಹನ ಖರೀದಿಸಿ ಅದರಿಂದ ಬರುವ ಬಾಡಿಗೆ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹವರ ಕುಟುಂಬದ ಕಾರ್ಡ್ ರದ್ದಾಗಿವೆ ಎಂದರು.
ಕಾರ್ಡ್ ರದ್ದಾಗಿರುವುದರಿಂದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಜತೆಗೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಪರಿಣಾಮ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಆದ್ದರಿಂದ ಪಾರದರ್ಶಕತೆಯಿಂದ ಪರಿಶೀಲನೆ ನಡೆಸಿ ಬಿಪಿಎಲ್ ಕಾರ್ಡ್‌ಗಳನ್ನು ಮತ್ತೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಆನೆ ಮತ್ತು ಚಿರತೆ ದಾಳಿಗಳಿಂದ ಬೆಳೆ ನಷ್ಟ, ಸಾಕು ಪ್ರಾಣಿಗಳನ್ನು ಕಳೆದುಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ವಹಿಸಬೇಕು. ಅಂತೆಯೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ವೇಳೆ ವೇದಿಕೆಯ ಯುವ ಘಟಕ ಕಾರ್ಯದರ್ಶಿ ಗಗನ್‌ಗೌಡ, ಕೃಷ್ಣ ಇತರರಿದ್ದರು.