ನಾಗಮಂಗಲದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೂಡ್ಲೀಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ನಾಗಮಂಗಲ: ನಮ್ಮ ಹೆಸರಿನಲ್ಲಿ ಒಂದು ಗುಂಟೆ ಜಮೀನು ಇಲ್ಲ, ನಾವು ಯಾವ ಉದ್ಯೋಗದಲ್ಲಿಯೂ ಇಲ್ಲ. ಆದರೂ ನಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯೆ ಗೀತಾ ರಾಜು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೂಡ್ಲೀಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಮಗೆ ಯಾವುದೇ ರೀತಿಯ ಆದಾಯವಿಲ್ಲ.
ಯಾವುದೇ ಆದಾಯ ತೆರಿಗೆ ಪಾವತಿ ಮಾಡುವಷ್ಟು ಆದಾಯವಿಲ್ಲ. ನನ್ನ ಹಾಗೂ ನನ್ನ ಪತಿಯ ಹೆಸರಿನಲ್ಲಿ ಒಂದು ಗುಂಟೆ ಜಮೀನು ಇಲ್ಲ. ಜೀವನ ನಡೆಸಲು ಒಂದು ಟ್ರಾೃಕ್ಟರ್ ಖರೀದಿ ಮಾಡಿದ್ದು ಅದಕ್ಕೆ ಲೋನ್ ಮಾಡಿಸಲು ಮಾತ್ರ ಆದಾಯ ತೆರಿಗೆ ನೋಂದಣಿ ಮಾಡಿಸಿದ್ದೆವು. ಅದನ್ನೇ ಮಾನದಂಡವಾಗಿಟ್ಟುಕೊಂಡು ಬಿಪಿಎಲ್ ಕಾರ್ಡ್ ರದ್ದುಗೊಳಿಸಿದ್ದಾರೆ. ಈ ರೀತಿಯಾದರೆ ನಿಜವಾದ ಬಡವರಿಗೆ ಅನ್ಯಾಯವಾಗುತ್ತದೆ. ಇಂದು ಪ್ರತಿಯೊಬ್ಬರೂ ಜೀವನ ನಡೆಸಲು ಲೋನ್ ಪಡೆಯುವುದು ಸಾಮಾನ್ಯ. ಆದರೆ ಅವರು ಯಾರೂ ಕೂಡ ಆದಾಯ ತೆರಿಗೆ ಪಾವತಿ ಮಾಡುವಷ್ಟು ಸಬಲರಲ್ಲ. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟ ಮಾಹಿತಿ ಪಡೆದು ಮುಂದಿನ ಸಭೆಗೆ ತಿಳಿಸಿ ಎಂದು ಸದಸ್ಯೆ ಗೀತಾ ರಾಜು ಆಹಾರ ನಿರೀಕ್ಷಕ ಅನಿಲ್ ಅವರಿಗೆ ಸೂಚಿಸಿದರು.
ತಾಲೂಕಿನಲ್ಲಿ ಒಟ್ಟು 3,771 ಅನರ್ಹ ಬಿಪಿಎಲ್ ಕಾರ್ಡ್‌ಗಳಿರುವ ಪಟ್ಟಿಯನ್ನು ಸರ್ಕಾರದಿಂದ ನಮಗೆ ನೀಡಲಾಗಿದ್ದು, ಈ ಪೈಕಿ ಇದುವರೆಗೂ 1,300 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಬದಲಾಯಿಸಲಾಗಿದೆ. ಸದಸ್ಯರ ಬಿಪಿಎಲ್ ಕಾರ್ಡ್ ರದ್ದಾಗಿರುವ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತೇನೆ ಎಂದು ಆಹಾರ ನಿರೀಕ್ಷಕ ಅನಿಲ್ ಸಭೆಗೆ ತಿಳಿಸಿದರು.
ಸಿಡಿಪಿಒ ಕೃಷ್ಣಮೂರ್ತಿ ಮಾತನಾಡಿ, ತಾಲೂಕಿನಲ್ಲಿ 80 ಜನರಿಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ಕೆಲವರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಮತ್ತೆ ಕೆಲವರು ಆದಾಯ ತೆರಿಗೆ ಪಾವತಿದಾರರಲ್ಲದಿದ್ದರೂ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ಅಂತವರನ್ನು ಗುರುತಿಸಿ ಅವರಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಕಳುಹಿಸಲಾಗಿದೆ. ಕೆಲವರು ಲೋನ್ ಉದ್ದೇಶಕ್ಕಾಗಿ ಆದಾಯ ತೆರಿಗೆಯ ನೋಂದಣಿ ಮಾಡಿಸಿದ್ದು ಅಂತವರಿಗೂ ಕೂಡ ಹಣ ಬರುತ್ತಿಲ್ಲ. ತಾಲೂಕಿನಲ್ಲಿ ಒಟ್ಟು 48,359 ಜನರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 47,518 ಜನರಿಗೆ ಹಣ ಬರುತ್ತಿದೆ. ಉಳಿದ 841 ಜನರಿಗೆ ಹಣ ಜಮಾವಾಗುತ್ತಿಲ್ಲ. ಇದರಲ್ಲಿ 264 ಜನರು ಮೃತರಾಗಿದ್ದು, 80 ಜನ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಉಳಿದ 497 ಜನರು ರೇಷನ್ ಕಾರ್ಡ್ ತಿದ್ದುಪಡಿ ಸೇರಿದಂತೆ ಮುಂತಾದ ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಪಾವತಿಯಾಗುತ್ತಿಲ್ಲವೆಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸೆಸ್ಕ್ ಎಇಇ ಅನುಷಾ ಮಾತನಾಡಿ, ಗೃಹಜ್ಯೋತಿಯ ಹಣ ಅಕ್ಟೋಬರ್ 2025ರವರೆಗೆ ಸರ್ಕಾರದಿಂದ ನಮ್ಮ ಇಲಾಖೆಗೆ ಜಮಾ ಆಗಿದೆ. ನಮ್ಮ ಇಲಾಖೆಯಿಂದ ಗೃಹಜ್ಯೋತಿ ಯೋಜನೆ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ತಾಪಂ ಮ್ಯಾನೇಜರ್ ಜಗನ್, ಗ್ಯಾರಂಟಿ ಸಮಿತಿ ಸದಸ್ಯರಾದ ವಿನಯ್, ರವಿಕಾಂತೇಗೌಡ, ದಿನೇಶ್, ಯಾಸೀನ್ ಸೇರಿದಂತೆ ಮತ್ತಿತರಿದ್ದರು.