ಪಟ್ಟಣದ ಬೆಂ-ಮೈ ಹೆದ್ದಾರಿ ಬದಿಯಲ್ಲಿ ನಡೆದುಹೋಗುತ್ತಿದ್ದ ವಿದ್ಯಾರ್ಥಿ ಪೃಥ್ವಿಗೆ ಹಿಂಬದಿಯಿಂದ ಗುದ್ದಿಕೊಂಡು ಬಳಿಕ ಹಳ್ಳಕ್ಕೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತ ಕಾರು.  
ಮಂಡ್ಯ

ಕಾರು ಡಿಕ್ಕಿ ಬಾಲಕ ಸ್ಥಳದಲ್ಲೇ ಸಾವು

ಶ್ರೀರಂಗಪಟ್ಟಣ: ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಸಮೀಪ ಶನಿವಾರ ಕಾರು ಡಿಕ್ಕಿ ಹೊಡೆದು ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗಂಜಾಂನ ಅಂಬೇಡ್ಕರ್ ಬೀದಿಯ ನಿವಾಸಿ ಶಿವಕುಮಾರ್ ಮಗ ಪೃಥ್ವಿ (17) ಮೃತ.
ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪೃಥ್ವಿ ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದ. ತಂದೆ ಶಿವಕುಮಾರ್ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಎಲೆಕ್ಟ್ರಿಷಿಯನ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ತಂದೆಯೊಂದಿಗೆ ಮನೆಗೆ ತೆರಳಲು ಕಲ್ಯಾಣಮಂಟಪ ಕಡೆಗೆ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಬಾಲಕನಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ. ಬಾಲಕ ಪೃಥ್ವಿಯ ಮುಖ, ತಲೆ ಹಾಗೂ ಕೈಕಾಲುಗಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಂತೈಸಿದ ತಂದೆ: ಅಪಘಾತ ವೇಳೆ ಮಗನಿಗೆ ಡಿಕ್ಕಿಯಾಗಿರುವುದನ್ನು ತಿಳಿಯದ ತಂದೆ ಶಿವಕುಮಾರ್ ಹಾಗೂ ಕಲ್ಯಾಣ ಮಂಟಪದ ಕೆಲಸಗಾರರು ಸ್ಥಳಕ್ಕೆ ಆಗಮಿಸಿ ಕಾರಿನೊಳಗೆ ಅಸ್ವಸ್ಥರಾಗಿದ್ದ ಚಾಲಕ ಹಾಗೂ ಇಬ್ಬರು ಮಕ್ಕಳನ್ನು ಹೊರಗೆಳೆದು ಕೂರಿಸಿ ಸಂತೈಸಿದ್ದಾರೆ. ಈ ವೇಳೆ ಕಾರಿನ ಕೆಳಗೆ ಸಿಲುಕಿ ಮೃತಪಟ್ಟಿದ್ದ ಬಾಲಕನ ಬಟ್ಟೆಯಿಂದ ಮಗನನ್ನು ಗುರುತು ಹಿಡಿದ ತಂದೆಯ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಆಗಮಿಸಿದ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಪೊಲೀಸರು ಸ್ಥಳ ಪರಿಶೀಲಿಸಿ ಬಾಲಕನ ಶವವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದರು. ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.