ಮಂಡ್ಯ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಕೃತಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು.
- ನಗರದಲ್ಲಿ ಕೃತಿ ಬಿಡುಗಡೆ ಸಮಾರಂಭ
- ಮಂಡ್ಯ ವಿವಿಯ ಪ್ರಸಾರಾಂಗ ವಿಭಾಗದಿಂದ ಆಯೋಜನೆ
ಮಂಡ್ಯ: ಭಾಷೆ ಎನ್ನುವುದು ಮಾನವ ಅಭಿವೃದ್ಧಿಯ ಪ್ರಮುಖ ಅಂಶವಾಗಿದೆ. ಅವಕಾಶಗಳನ್ನು ಪಡೆದುಕೊಳ್ಳುವುದಕ್ಕೆ ಭಾಷೆ ಪೂರಕ ಸಾಧನವಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಮಂಡ್ಯ ವಿವಿಯ ಪ್ರಸಾರಾಂಗ ವಿಭಾಗದಿಂದ ಆಯೋಜಿಸಿದ್ದ ಸಾಹಿತಿ ಡಾ.ಸುಮಾರಾಣಿ ಶಂಭು ರಚನೆಯ ಬಿ.ಇಡಿ ಪಠ್ಯಕ್ರಮಾನುಸಾರ ಭಾಷೆಯ ಸುತ್ತ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಪ್ರತಿಯೊಬ್ಬರಿಗೂ ಮುಖ್ಯವಾದ ಆಯಾಮ. ಎಷ್ಟೋ ಸಂದರ್ಭದಲ್ಲಿ ನಾವು ಕನ್ನಡ ಭಾಷೆಯನ್ನು ಸಮರ್ಪಕವಾಗಿ ಮಾತನಾಡುತ್ತಿಲ್ಲ ಮತ್ತು ವ್ಯವಹಾರಿಸುತ್ತಿಲ್ಲ. ಮೊದಲು ನಮ್ಮ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನವಿರಬೇಕು. ಭಾಷೆಯು ಜೀವನದ ಪ್ರಮುಖ ಅಂಶವಾಗಿದೆ. ಸಂವಹನಕ್ಕಿರುವ ಉತ್ತಮ ಮಾಧ್ಯಮ. ಹೀಗಾಗಿ ಭಾಷೆಯೇ ನಮಗೆಲ್ಲಾ ಬದುಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಮಾನಗಳಲ್ಲಿ ಪುಸ್ತಕ ಸಂಸ್ಕೃತಿ ಮತ್ತು ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇಂತಹ ಸಮಯದಲ್ಲಿ ಬರಹಗಾರ್ತಿ ಡಾ.ಪಿ.ಸುಮಾರಾಣಿ ಶಂಭು ಅವರು ಭಾಷೆಯ ಸುತ್ತ’ ಕೃತಿಯ ಮೂಲಕ ವಿದ್ಯಾರ್ಥಿಗಳಿಗೆ ಪೂರಕವಾದ ಮಾಹಿತಿಗಳನ್ನು ನೀಡಿದ್ದಾರೆ. ಈ ಕೃತಿಯು ವಿಭಿನ್ನ ಪ್ರಯತ್ನವಾಗಿದೆ. ಪುಸ್ತಕ ಬರವಣಿಗೆ ಸುಲಭವಾದ ಕೆಲಸವಲ್ಲ. ಬರಹಗಾರನಿಗೆ ಬರಹದ ಬಗ್ಗೆ ಕಾಳಜಿ ಇರಬೇಕು. ಅಧ್ಯಯನ ಶೀಲತೆಯಂತೂ ಬಹಳ ಮುಖ್ಯ. ಅಧ್ಯಾಪಕರಾದವರು ಜ್ಞಾನವನ್ನು ಸಂಪಾದಿಸಬೇಕು. ಪುಸ್ತಕ ಪ್ರೀತಿ ರೂಢಿಸಿಕೊಳ್ಳಬೇಕು. ನಿರಂತರ ಅಧ್ಯಯನ, ಪುಸ್ತಕಗಳ ಓದಿನಿಂದ ಮಾತ್ರ ಒಬ್ಬ ಶಿಕ್ಷಕ ಮತ್ತು ಬರಹಗಾರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿಶ್ಲೇಷಿಸಿದರು.
ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಭಾಷೆಯ ಸುತ್ತ ಕೃತಿಯು ಪ್ರಶಿಕ್ಷಣಾರ್ಥಿಗಳಿಗೆ ಒಳ್ಳೆಯ ಕೈಪಿಡಿಯಾಗಿದೆ. ಈ ಪುಸ್ತಕವು ಸಂಶೋಧನೆಯಿಅದ ಕೂಡಿದೆ. ಅನೇಕ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಿದೆ. ಕೃತಿಯಲ್ಲಿ ಭಾಷೆಯ ಮಹತ್ವದ ಬಗ್ಗೆ ವಿವರವಿದೆ. ಭಾವನೆ ಇಲ್ಲದೆ ಅಕ್ಷರ ಮೂಡಲಾರದು. ಭಾಷೆಯನ್ನು ಕೌಶಲತೆಯಿಂದ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಭಾಷೆಯ ಸುತ್ತ’ ಕೃತಿಯು ವಿದ್ಯಾರ್ಥಿಗಳ ಆಲೋಚನೆಗೆ ಆಸ್ಪದ ನೀಡುವ ಕೃತಿಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಪ್ರ್ರೊ.ಎಸ್.ಬಿ.ಶಂಕರಗೌಡ ಮಾತನಾಡಿದರು. ವಿವಿಯ ಪ್ರಸಾರಂಗ ನಿರ್ದೇಶಕ ಪ್ರೊ.ಎಸ್.ಚಂದ್ರಕಿರಣ್, ಮೌಲ್ಯಮಾಪನ ಕುಲಸಚಿವ ಪ್ರೊ.ವೆಂಕಟರಮಣ, ಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಲ್.ಸುರೇಶ್, ಸಿಂಡಿಕೇಟ್ ಸದಸ್ಯ ನಾಗರಾಜು ಇದ್ದರು.