ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಪುಸ್ತಕ ಮನೆ ಅಂಕೇಗೌಡ ಅವರನ್ನು ಸನ್ಮಾನಿಸಲಾಯಿತು.
- ನಾನೂ ಕಾಫಿರ ಪುಸ್ತಕ ಬಿಡುಗಡೆ
- ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಎಡಪಂಥೀಯರ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟೀಕಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸ್ವರಾಷ್ಟ್ರ ಪ್ರಕಾಶನ ಸಂಸ್ಥೆ ಉದ್ಘಾಟನೆ ಮತ್ತು ಸಂವಿಧಾನ ತಜ್ಞ, ಲೇಖಕ ಡಾ.ಸುಧಾಕರ ಹೊಸಳ್ಳಿ ರಚಿತ ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವತಂತ್ರವಾಗಿ ಆಡಳಿತ ನಡೆಸುತ್ತಿಲ್ಲ ಎಂದರು.
ಎಡಪಂಥಿಯರು ಮಹಾತ್ಮ ಗಾಂಧೀಜಿ ಅವರ ಬಗ್ಗೆ ಮಾತ್ರ ತಿರುಚುತ್ತಿಲ್ಲ. ಬದಲಿಗೆ ಸುಭಾಷ್ ಚಂದ್ರ ಬೋಸ್, ಬುದ್ಧ, ಬಸವಣ್ಣ, ಅಂಬೇಡ್ಕರ್ ಬಗ್ಗೆನೂ ತಮ್ಮ ತರ್ಕಕ್ಕೆ ಅನುಗುಣವಾಗಿ ತಿರುಚಿ ಹೈಜಾಕ್ ಮಾಡಿದ್ದಾರೆ. ಇದು ರಾಷ್ಟ್ರಕವಿ ಕುವೆಂಪುವರೆಗೂ ಮುಂದುವರಿಯಿತು. ಕುವೆಂಪು ಮತ್ತು ಸ್ವಾಮಿ ವಿವೇಕಾನಂದರಿಗೂ ಹಿಂದೂ ಸಂಸ್ಕೃತಿಗೂ ಸಂಬಂಧವಿಲ್ಲವೆಂದು ಬಿಂಬಿಸಲು ಹೊರಟರು. ಹಿಂದುತ್ವ ಮತ್ತು ಆಧ್ಯಾತ್ಮಿಕತೆಗೆ ವಿರೋಧಿ ಎಂದು ಬಿಂಬಿಸಿ ಸಮಾಜವಾದಿ ಎಂದು ಕರೆದರು ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಎಡಪಂಥೀಯರು ಟಿಪ್ಪು ಸುಲ್ತಾನ್‌ನನ್ನೇ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿ, ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಾರೆ. ಹಿಂದೂ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಕಾಲದಲ್ಲಿ 1 ಲಕ್ಷಕ್ಕೂ ಹೆಚ್ಚು ಹಿಂದೂಗಳು ಹಾಗೂ 70 ಸಾವಿರ ಕ್ರಿಶ್ಚಿಯನ್‌ರನ್ನು ಭೀಕರವಾಗಿ ನರಮೇಧ ಮಾಡಿದ್ದಾನೆ. ಹಲವು ಹಿಂದೂ ದೇವಾಲಯಗಳನ್ನು ಕೆಡವಿದ್ದಾನೆ. ಹೀಗಿರುವಾಗ ಶೃಂಗೇರಿ ದೇವಸ್ಥಾನಕ್ಕೆ ದಾನ ಕೊಟ್ಟಿದ್ದಾನೆ ಎಂದು ಬಿಂಬಿಸಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಿರುವುದು ನಾಚಿಕೆಗೇಡು ಎಂದು ಹರಿಹಾಯ್ದರು.
ಅಂಬೇಡ್ಕರ್ ಅವರು ಹಿಂದೂ ಮತ್ತು ಸಮಾಜ ಸುಧಾರಕರಾಗಿದ್ದರು. ಇಸ್ಲಾಮಿಕ್ ವಿರುದ್ಧ ಹಿಂದೂಗಳ ಆತ್ಮಸಾಕ್ಷಿಯನ್ನು ಎಚ್ಚರಿಸಿದ್ದ ಮಹಾನ್ ನಾಯಕ. ಕಾಂಗ್ರೆಸ್‌ನವರು ಜೀವಂತವಾಗಿಟ್ಟಿದ್ದ ಜಾತೀಯತೆ ಮತ್ತು ಅಸ್ಪಶ್ಯತೆಯನ್ನು ವಿರೋಧಿಸಿ ಅವರು ಬೌದ್ಧ ಧರ್ಮಕ್ಕೆ ಮತಾಂತರವಾದರೇ ಹೊರತು, ಹಿಂದುತ್ವ ವಿರೋಧಿಸಿಯಲ್ಲ ಎಂದು ತಿಳಿಸಿದರು.
ಸಂವಿಧಾನ ತಿದ್ದುಪಡಿ ಮಾಡಲು ಹೊರಟಾಗ ಕಾಂಗ್ರೆಸ್ ಮತ್ತು ಎಡಪಂಥೀಯರು ವಿರೋಧಿಸಿ ದೊಡ್ಡ ಹೋರಾಟವನ್ನೇ ಮಾಡಿದರು. ಆದರೆ, ಯಾವ ಪ್ರಧಾನ ಮಂತ್ರಿಗಳ ಕಾಲದಲ್ಲಿ ಎಷ್ಟೆಷ್ಟು ಬಾರಿ ತಿದ್ದುಪಡಿಯಾಗಿದೆ ಎಂದು ತಿಳಿದ ಮೇಲೆ ವಿರೋಧಿಗಳು ಸುಮ್ಮನಾದರು. ಪ್ರಸ್ತುತ ತಿದ್ದುಪಡಿ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ಕೊಡಲು ನಿರಾಕರಿಸಿದರು. ಅಂಬೇಡ್ಕರ್ ಅವರು ಜಮ್ಮು-ಕಾಶ್ಮೀರ ಒಳಗೊಂಡಂತೆ ಭಾರತ ಅಖಂಡವಾಗಬೇಕೆಂದು ಬಯಸಿದ್ದರು. ಆದರೆ, ನೆಹರು ಸರ್ಕಾರ ಮತ್ತು ಎಡಪಂಥಿಯರು ಒಪ್ಪಲಿಲ್ಲ ಎಂದು ಆರೋಪಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಅರ್ಥಶಾಸ್ತದಲ್ಲಿ ಪಿ.ಎಚ್‌ಡಿ ಮಾಡಿ ನಾಯಕರಾದರು. ಆರ್ಥಿಕ ಶಿಸ್ತು ಕಾಪಾಡಲು ಹಣಕಾಸು ಮಂತ್ರಿ ಆಗಿ ಆರ್ಥಿಕ ಸಮಾನತೆ ತರಲು ಹೋದಾಗ ಕಾಂಗ್ರೆಸ್‌ನ ಪ್ರಧಾನಮಂತ್ರಿಯಾಗಿದ್ದ ಜವಾಹರ್ ಲಾಲ್ ನೆಹರು ವಿರೋಧ ಮಾಡಿದರು. ನೆಹರು ಅವರ ದೃಷ್ಟಿಕೋನ ಆರ್ಥಿಕ ಸಮಾನತೆ ಮಾಡುವ ಉದ್ದೇಶವಿರಲಿಲ್ಲ. ಸಮಾಜವಾದಿ ಮೂಲಕ ಸಮಾಜ ನಿಯಂತ್ರಣ ಮಾಡುವುದೇ ಉದ್ದೇಶವಿತ್ತು ಎಂದರು.
ಎರಡನೇ ವಿಶ್ವ ಯುದ್ಧ ನಂತರ ಜರ್ಮನಿ, ಜಪಾನ್, ಚೀನಾ ಸಂಪೂರ್ಣ ನಾಶವಾಗಿತ್ತು. ಆನಂತರ ಆರ್ಥಿಕವಾಗಿ ಬೆಳೆದರು. ಆದರೆ, ಅವರ ಜತೆಯೇ ನಾವು ಆರ್ಥಿಕವಾಗಿ ಬೆಳೆಯಬಹುದಾಗಿತ್ತು. ಅದು ಸಮಾಜವಾದಿ ಮೂಲಕವೇ ಹೋಗಬೇಕು ಎಂಬುದು ನೆಹರೂ ಅವರ ನಿಲುವಾಗಿದ್ದರಿಂದ ಬಹುಶಃ ನಮಗೆ ಹಿನ್ನಡೆಯಾಯಿತು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಇಬ್ಬರೂ ಮಹಾನ್ ವ್ಯಕ್ತಿಗಳು. ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ನೈತಿಕ ನಾಯಕರಾಗಿದ್ದರೆ, ಅಂಬೇಡ್ಕರ್ ಸಂವಿಧಾನ ಶಿಲ್ಪಿಗಳಾಗಿದ್ದಾರೆ. ಪ್ರತಿನಿತ್ಯ ಅಂಬೇಡ್ಕರ್ ಅವರ ವಿಚಾರಗಳನ್ನು ಮಾಡುತ್ತಲೇ ಇರುತ್ತೇವೆ ಎಂದರು.
ಸ್ವರಾಷ್ಟ್ರ ಪ್ರಕಾಶನ ಸಂಸ್ಥೆಯ ಚಂದ್ರಶೇಖರ್ ದಡದಪುರ, ನಾನೂ ಕಾಫಿರ ಕೃತಿ ಕರ್ತೃ ಡಾ.ಸುಧಾಕರ ಹೊಸಳ್ಳಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಮನೆ ಅಂಕೇಗೌಡ ಅವರನ್ನು ಸನ್ಮಾನಿಸಲಾಯಿತು.