ಮಂಡ್ಯದಲ್ಲಿ ಆಯೋಜಿಸಿದ್ದ ಅಕ್ಷರ ಜಾತ್ರೆಯಲ್ಲಿ ಎರಡು ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು. 
ಮಂಡ್ಯ

ಯುಗಾದಿ ಹಬ್ಬ ಸಂಸ್ಕೃತಿ ಸಂಗಮ: ಬಿಜೆಪಿ ಮೈಸೂರು ವಿಭಾಗದ ಸಹಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಮತ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಕನ್ನಡ ಅಕ್ಷರ ಜಾತ್ರೆ
  • ಡಾ.ಜೀಶಂಪ ಸಾಹಿತ್ಯ ವೇದಿಕೆಯಿಂದ ಆಯೋಜನೆ
ಮಂಡ್ಯ: ಯುಗಾದಿ ಕೇವಲ ಒಂದು ಹಬ್ಬವಲ್ಲ, ಅದು ಪ್ರಕೃತಿ ಮತ್ತು ಸಂಸ್ಕೃತಿಯ ಸಂಗಮದ ಮಹಾಪರ್ವ ಎಂದು ಬಿಜೆಪಿ ಮೈಸೂರು ವಿಭಾಗದ ಸಹ ಪ್ರಭಾರಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ 16ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಮತ್ತು ಯುಗಾದಿ ಕವಿಗೋಷ್ಠಿ, ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಇಲ್ಲದೆ ಜೀವನವಿಲ್ಲ. ಪ್ರಕೃತಿಯೇ ಮಾನವನ ಬದುಕಿಗೆ ಮೂಲಾಧಾರ. ಚೈತ್ರ ಮಾಸದಲ್ಲಿ ಪ್ರಕೃತಿ ತನ್ನ ಸಂಪೂರ್ಣ ಹೊಸತನವನ್ನು ಪ್ರಕಟಿಸಿಕೊಳ್ಳುತ್ತದೆ. ಈ ಸತ್ಯವನ್ನು ವಿಜ್ಞಾನವೂ ಅಲ್ಲಗಳೆಯಲಾರದು ಎಂದು ತಿಳಿಸಿದರು.
ಯುಗಾದಿ ಎಂದರೆ ಯುಗಗಳ ಆದಿ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ. ಈ ನಾಲ್ಕು ಯುಗಗಳನ್ನು ದಾಟಿ ಬಂದಿರುವ ಜೀವಾತ್ಮನಿಗೆ ಆದಿ-ಅಂತ್ಯಗಳ ಅರಿವು ಮುಖ್ಯ. ಆ ಅರಿವೇ ಮುಕ್ತಿ. ಅರಿವಿಲ್ಲದಿದ್ದರೆ ಯಾವ ಧರ್ಮ-ಕರ್ಮಕ್ಕೂ ಬೆಲೆಯಿಲ್ಲ. ಪಾಡ್ಯದ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಬಿಂದುವಿನ ಮೇಲೆ ಬರುತ್ತಾನೆ. ಸಂಪಾತ ಬಿಂದು ಎಂದರೆ ಮಕರ ಮತ್ತು ಕರ್ಕಾಟಕ ವೃತ್ತಗಳು ಪರಸ್ಪರ ಛೇದಿಸುವ ಬಿಂದು. ಈ ಸಂದರ್ಭದಲ್ಲಿಯೇ ವಸಂತ ಋತು ಪ್ರಾರಂಭವಾಗುತ್ತದೆ. ಯುಗಾದಿ ಬಂತೆಂದರೆ ಪ್ರಕೃತಿಯಲ್ಲಿ ಹೊಸ ಪುಳಕ. ಗಿಡ-ಮರಗಳು ಚಿಗುರಿ ಹಸಿರೆಲೆಗಳಿಂದ ಕಂಗೊಳಿಸುತ್ತಿದ್ದರೆ, ಸುಡುಬಿಸಿಲ ನಡುವೆಯೂ ಆಗಾಗ ಬೀಸುವ ತಂಗಾಳಿ ಮನಕ್ಕೆ ಮುದ ನೀಡುತ್ತದೆ. ಅರಳಿ ನಿಂತು ಸುವಾಸನೆ ಬೀರುವ ಕುಸುಮಗಳು, ಅವುಗಳ ಮೇಲೆ ಹಾರಾಡಿ ಮಕರಂದ ಹೀರುವ ಜೇನುನೊಣಗಳ ಝೇಂಕಾರ ಎಲ್ಲೆಡೆ ಕಂಡುಬರುತ್ತದೆ. ಯುಗಾದಿ ಎನ್ನುವುದು ನಿಸರ್ಗಕ್ಕೊಂದು ಮರುಹುಟ್ಟು, ಮುಂದೆ ಬರಲಿರುವ ಎಲ್ಲ ಹಬ್ಬಗಳಿಗೆ ಮುನ್ನುಡಿ. ಯುಗಾದಿ ಆಚರಣೆ ವೇದಗಳ ಕಾಲದಿಂದಲೂ ನಡೆದುಬಂದಿದೆ. ಸಮಾಜದ ಪ್ರತಿಯೊಬ್ಬರೂ ಬೇವು- ಬೆಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚಾಟದಿಂದ ವಿಶ್ವದ ಹಲವು ದೇಶಗಳು ನಲುಗುವಂತಾಗಿದೆ. ಅನೇಕ ದೇಶಗಳಲ್ಲಿ ಸಾವು- ನೋವಾಗಿ ತೈಲ ಸಂಕಷ್ಟ ಎದುರಾಗಿದೆ. ಆದರೆ ವಿಶ್ವದಲ್ಲಿ ಏನೇ ಸಮಸ್ಯೆ ಆದರೂ ಭಾರತ ಮಾತ್ರ ಸುಭೀಕ್ಷವಾಗಿದೆ. ಅದಕ್ಕೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವವೂ ಕಾರಣ ಎಂದು ಶ್ಲಾಘಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಮಾತನಾಡಿ, ಪ್ರತಿ ಮನುಷ್ಯ ಯಾವ ಕ್ಷೇತ್ರದಲ್ಲಿ ಬೆಳೆಯುತ್ತಾನೋ ಆ ಕ್ಷೇತ್ರವನ್ನು ತಾತ್ಸಾರ ಮಾಡದೇ ಅದೇ ಕ್ಷೇತ್ರದಲ್ಲಿ ಮುಂದುವರಿದರೆ ಸಾಧನೆ ಸಾಧ್ಯ. ಪ್ರತಿಯೊಬ್ಬರೂ ಪುಸ್ತಕವನ್ನು ಓದುವುದರಿಂದ ಮನುಷ್ಯನ ಪ್ರಬುದ್ಧತೆ ಬೆಳೆಯುತ್ತದೆ. ನಾನು ನನ್ನ ಮನೆಯನ್ನೇ ಪುಸ್ತಕದ ಮನೆ ಮಾಡಿ 25 ಲಕ್ಷ ಪುಸ್ತಕ ಸಂಗ್ರಹಿಸಿದ್ದೇನೆ. ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುಸ್ತಕ ಸೇರಿ ವಿಶ್ವದ ಅನೇಕ ಸಾಹಿತಿಗಳ ಪುಸ್ತಕ ಸಂಗ್ರಹಿಸಿದ್ದೇನೆ. ನನ್ನ ಈ ಪುಸ್ತಕ ಸಂಗ್ರಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿರುವುದು ನನ್ನ ಕೆಲಸಕ್ಕೆ ಸಾರ್ಥಕತೆ ಸಿಕ್ಕಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ಕವಿ ಹಾಗೂ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಪರಾಭವ ಸಂವತ್ಸರದಲ್ಲಿ ಈ ಬಾರಿಯ ಯುಗಾದಿ ಬಂದಿದೆ. ಏಕೆಂದರೆ ವಿಶ್ವದ ಕೆಲವೆಡೆ ಯುದ್ಧ ನಡೆಯುತ್ತಿದೆ. ಈ ಯುದ್ಧಕ್ಕೆ ಡೊನಾಲ್ಡ್ ಟ್ರಂಪ್ ಮನಸ್ಥಿತಿ ಕಾರಣ. ಯುದ್ಧದ ಮೂಲಕ ಏನು ಪಡೆಯಲು ಸಾಧ್ಯವಿಲ್ಲ. ಕೇವಲ ಜನರಿಗೆ ಸಮಸ್ಯೆ ಆಗುತ್ತಿದೆ. ಯುದ್ಧ ಗೆದ್ದವನು ಚಕ್ರವರ್ತಿಯಾದ, ಸೋತವನು ಗೊಮ್ಮಟನಾದ ಎಂಬ ಮಾತಿದೆ. ಈ ಯುದ್ಧದಲ್ಲಿ ಯಾರು ಚಕ್ರವರ್ತಿ ಮತ್ತು ಗೊಮ್ಮಟನಾಗುತ್ತಾರೋ ಕಾಲವೇ ಉತ್ತರ ಕೊಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಭಾವನೆಗಳ ಬಣ್ಣ, ಹೊಸಭಾವ ಕೃತಿಗಳ ಕುರಿತು ಲೇಖಕ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಮಂಗಲ ಮಾತನಾಡಿ, ಜಗತ್ತು ಶೀಘ್ರ ಗತಿಯಲ್ಲಿ ಬದಲಾವಣೆ ಕಾಣುತ್ತಿದೆ. ವಾಟ್ಸ್‌ಆ್ಯಪ್, ಫೇಸ್ಬುಕ್, ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಜನ ಹೆಚ್ಚಿನ ಸಮಯ ವ್ಯಯ ಮಾಡುತ್ತಿದ್ದಾರೆ. ಹಾಗಾಗಿ ಅವುಗಳ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲಾ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಸಂತೋಷಕುಮಾರ ಕರಹರಿ ಮಾತನಾಡಿದರು. ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಆಚಾರ್ಯ ಗುರುಕುಲದ ವ್ಯವಸ್ಥಾಪಕ ನಿರ್ದೇಶಕ ಡಾ.ಮೋಹನ ಕುಮಾರ ಶಾಸ್ತ್ರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿನಕುರಳಿ ಲೋಕೇಶ್, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಬನ್ನಂಗಾಡಿ ಸಿದ್ದಲಿಂಗಯ್ಯ, ಎಸ್.ಕೃಷ್ಣ ಸ್ವರ್ಣಸಂದ್ರ, ರಾಗಿಮುದ್ದನಹಳ್ಳಿ ನಾಗೇಶ್, ರೂಪಾ ಹೊಸಹಳ್ಳಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ವೈ.ಎಸ್.ಮಾಣಿಕ್ಯ ರಚನೆಯ ಭಾವನೆಗಳ ಬಣ್ಣ ಹಾಗೂ ಮಂಡ್ಯ ಯಶು ರಚನೆಯ ಹೊಸಭಾವ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಅಂತೆಯೇ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ನಾಗರಿಕ ಅಭಿನಂದನೆ, ಕರ್ನಾಟಕ ಸೇವಾ ಭೂಷಣ ಹಾಗೂ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.