ಮಂಡ್ಯ ನಗರದ ಮಿಮ್ಸ್‌ನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಶಸ್ತ್ರ ಚಿಕಿತ್ಸಕರು ಹಾಗೂ ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳು ಸ್ವಯಂಪ್ರೇರಿತ ರಕ್ತದಾನ ಮಾಡಿದರು. 
ಮಂಡ್ಯ

ರಕ್ತದಾನದಿಂದ ಯಾವುದೇ ಸಮಸ್ಯೆಯಾಗಲ್ಲ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮಿಮ್ಸ್‌ನಲ್ಲಿ ರಕ್ತದಾನ ಶಿಬಿರ
  • ಶಸ್ತ್ರ ಚಿಕಿತ್ಸಕರು ಹಾಗೂ ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳಿಂದ ಆಯೋಜನೆ
ಮಂಡ್ಯ: ರಕ್ತದಾನ ಮಾಡುವುದರಿಂದ ಭಯ ಪಡುವ ಅವಶ್ಯವಿಲ್ಲ. ಅದರಿಂದ ಯಾವುದೇ ತೊಂದರೆಯಿಲ್ಲ. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿ ಯಾಗುತ್ತಿದೆ. ಆರೋಗ್ಯ ಸುಧಾರಿಸುತ್ತದೆ. ಸಾವು ನೋವಿನಲ್ಲಿರುವ ಜನರಿಗೆ ಜೀವದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಮಿಮ್ಸ್ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಮಿಮ್ಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಶಸ್ತ್ರ ಚಿಕಿತ್ಸಕರು ಹಾಗೂ ಎಂಬಿಬಿಎಸ್ ಪದವಿ ವಿದ್ಯಾರ್ಥಿಗಳ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನಕ್ಕಿಂತ ದೊಡ್ಡದಾನ ಇಲ್ಲ. ಯಾವುದೇ ಆಸೆ, ಆಮಿಷವಿಲ್ಲದೆ ರಕ್ತದಾನ ಮಾಡುತ್ತಾರೆ. ರಕ್ತಕ್ಕೆ ಬೇರೆ ಪರ್ಯಾಯ ಇಲ್ಲದೆ ಇರುವುದರಿಂದ ರಕ್ತವನ್ನು ಔಷಧ ಎಂದು ಕರೆಯುತ್ತೇವೆ. ಇತ್ತೀಚೆಗೆ ರಸ್ತೆ ಅಪಘಾತಗಳು, ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಮಯದಲ್ಲಿ ರಕ್ತದ ಉಪಯೋಗ ಬರುತ್ತದೆ ಎಂದು ಹೇಳಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ರಕ್ತದಾನ ಮಹಾದಾನ. ಸಾಕಷ್ಟು ಜೀವ ಉಳಿಸಲು ರಕ್ತದಾನ ಶ್ರೇಷ್ಠ. ಸರ್ಜನ್‌ಗಳು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತಕೊಟ್ಟು ಜೀವಗಳನ್ನು ಬದುಕಿಸಲು ಭಾಗವಹಿಸಿ ರಕ್ತದಾನ ಶಿಬಿರ ಯಶಸ್ವಿ ಗೊಳಿಸುತ್ತಿದ್ದಾರೆ. ರಕ್ತದ ಅವಶ್ಯಕತೆ ಇರುವ ಒ ನೆಗೆಟಿವ್ ಮತ್ತು ಬಿ ನೆಗೆಟಿವ್ ರಕ್ತ ಸಿಗುವುದು ಕಷ್ಟ. ರಕ್ತ ತೀರ ಅವಶ್ಯಕತೆ ಇದ್ದಾಗ ಅಂತವರನ್ನು ಲೇಬಲ್ ಮಾಡಿ ನಮೂದಿಸಿದರೆ ಬೇರೆಯವರಿಗೆ ರಕ್ತ ಅವಶ್ಯಕತೆ ಇದ್ದಾಗ ಸ್ಫೂರ್ತಿದಾಯಕವಾಗುತ್ತದೆ ಎಂದು ಹೇಳಿದರು.
ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ರಕ್ತನಿಧಿ ಕೇಂದ್ರದ ಡಾ.ಮುರುಳೀಧರ್, ರಫೀಕ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರಿದ್ದರು. ಇದೇ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸಕರಾದ ಡಾ.ಬಿ.ಕೆ.ಸುರೇಶ್, ಡಾ.ಸ್ವರೂಪ್, ಡಾ.ಲಿಂಗರಾಜು, ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.