ಬಸರಾಳು ಗ್ರಾಮದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ರಕ್ತವನ್ನು ಮಿಮ್ಸ್‌ಗೆ ಹಸ್ತಾಂತರ ಮಾಡಲಾಯಿತು.
- ಯುವಕರು ಸ್ವಯಂಪ್ರೇರಿತ ರಕ್ತದಾನ
- ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಹಸ್ತಾಂತರ
ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ 517ನೇ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ 25 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಈ ಮೂಲಕ ಕಾರ್ಯಕ್ರಮವನ್ನು ಮಾದರಿಯನ್ನಾಗಿ ಆಚರಣೆ ಮಾಡಲಾಯಿತು.
ಬಸರಾಳು ಕೆಂಪೇಗೌಡ ಜಯಂತಿ ಮಹೋತ್ಸವ ಸಮಿತಿ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್), ಜೀವಧಾರೆ ಟ್ರಸ್ಟ್ ಮಂಡ್ಯ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಸಂಗ್ರಹಿಸಿದ ರಕ್ತವನ್ನುಮಿಮ್ಸ್‌ಗೆ ಹಸ್ತಾಂತರ ಮಾಡಲಾಯಿತು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಇದೇ ವೇಳೆ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಆಯೋಜಿಸಲಾಗಿತ್ತು. ಇದಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಸಮಿತಿಯಿಂದ ಕೆಂಪೇಗೌಡ ಜಯಂತ್ಯುತ್ಸವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಮಂಡ್ಯ-ನಾಗಮಂಗಲ ಮುಖ್ಯರಸ್ತೆಯ ಆಟೋ ನಿಲ್ದಾಣದಲ್ಲಿ ಆವರಣದಲ್ಲಿ ನಿರ್ಮಿಸಲಾಗಿದ್ದ ಸುಂದರ ಮಂಟಪದಲ್ಲಿ ಕೆಂಪೇಗೌಡರ ಭಾವಚಿತ್ರಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅನ್ನದಾಸೋಹ ನಡೆಯಿತು.