ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ  
ಮಂಡ್ಯ

ಐಎನ್‌ಡಿಐಎ ಒಕ್ಕೂಟ ಮಹಿಳಾ ವಿರೋಧಿ: ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಕ್ರೋಶ

ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯಿಂದ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಅಂಗೀಕಾರವಾಗುವುದನ್ನು ಐಎನ್‌ಡಿಐಎ ಒಕ್ಕೂಟ ತಡೆದಿದೆ. ಈ ಮೂಲಕ ತಾವು ಮಹಿಳಾ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ ಮಂಡಿಸಿದ ಮೀಸಲು ಮಸೂದೆ ಬೆಂಬಲಿಸದ ವಿಪಕ್ಷಗಳು ಮಹಿಳೆಯರನ್ನು ಅವಮಾನಿಸಿದೆ. ಈ ಮೂಲಕ ಮಹಿಳೆಯರ ಶಕ್ತಿ, ಸಾರ್ಮಥ್ಯವನ್ನು ಲಘುವಾಗಿ ಪರಿಗಣಿಸಿವೆ. ಆದರೆ ಕಾಂಗ್ರೆಸ್ ಸೇರಿದಂತೆ ಐಎನ್‌ಡಿಐಎ ಒಕ್ಕೂಟದ ನಡೆಯನ್ನು ದೇಶದ ಮಹಿಳೆಯರು ಗಮನಿಸುತ್ತಿದ್ದಾರೆ. ಮಹಿಳಾ ವಿರೋಧಿ ಧೋರಣೆಯ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತಿದ್ದಾರೆ. ಇಂತಹ ನಡೆಗೆ ಮುಂದಿನ ದಿನದಲ್ಲಿ ಐಎನ್‌ಡಿಐಎ ಒಕ್ಕೂಟಕ್ಕೆ ನಾರಿಯರು ತಮ್ಮ ಶಕ್ತಿ ತೋರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರು ಸಬಲರಾಗುವುದನ್ನು ಐಎನ್‌ಡಿಐಎ ಒಕ್ಕೂಟ ಸಹಿಸುತ್ತಿಲ್ಲ. ಜತೆಗೆ ಮುಂದಿನ ದಿನದಲ್ಲಿ ತಮ್ಮ ನಾಯಕತ್ವಕ್ಕೆ ಧಕ್ಕೆಯಾಗಬಹುದೆನ್ನುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಮಸೂದೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇನ್ನು ಮಸೂದೆಗೆ ಸೋಲಾಗಿರುವುದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಅತೀವ ಸಂತೋಷಪಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಮಹಿಳೆಯರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಮರೆತಂತಿದೆ. ಆದ್ದರಿಂದ ಮಹಿಳಾ ವಿರೋಧಿ ನೀತಿಗೆ ರಾಜ್ಯದಲ್ಲಿಯೂ ಕಾಂಗ್ರೆಸ್ ಪಾಠ ಕಲಿಯಲಿದೆ ಎಂದಿದ್ದಾರೆ.