ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ 
ಮಂಡ್ಯ

ಚುಂಚಶ್ರಿ ವಿಚಾರ ಮಾತನಾಡುವಾಗ ಎಚ್ಚರಿಕೆಯಿರಲಿ: ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ವಿರುದ್ಧ ಹೇಳಿಕೆಗೆ ಆಕ್ರೋಶ
  • ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಟೀಕೆ
ಮಂಡ್ಯ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಜತೆಗೆ ವಿವೇಚನೆ ಇರಬೇಕು. ಈ ನಿಟ್ಟಿನಲ್ಲಿ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ನೀಡಿರುವ ಹೇಳಿಕೆ ಅವರಿಗೆಯೇ ಶೋಭೆ ತರುವಂತದ್ದಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಿಚುಂಚನಗಿರಿ ಮಠಕ್ಕೆ 1800 ವರ್ಷದ ಇತಿಹಾಸವಿದೆ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಸದುದ್ದೇಶದಿಂದ ಡಾ.ನಿರ್ಮಲಾನಂದನಾಥ ಅವರನ್ನು ನೇಮಿಸಿದರು. ಅದರಂತೆ ನಿರ್ಮಲಾನಂದನಾಥ ಶ್ರೀಗಳು ಕೂಡ ಪ್ರಪಂಚದಾದ್ಯಂತ ಮಠದ ಹಿರಿಮೆಯನ್ನು ಪಸರಿಸುತ್ತಿದ್ದಾರೆ. ಸರ್ಕಾರ ಸಮರ್ಪಕವಾಗಿ ಮಾಡಲಾಗದ ಕಾರ್ಯವನ್ನು ಅಂದರೆ ಅನ್ನ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಮಠ ತನ್ನದೇ ಆದ ಕೊಡುಗೆ ನೀಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಮಠದಲ್ಲಿ ಶಿಕ್ಷಣ ಕಲಿತು ಬದುಕು ರೂಪಿಸಿಕೊಂಡಿದ್ದಾರೆ. 650ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದಿದ್ದಾರೆ.
ಒಕ್ಕಲಿಗ ಸೇರಿದಂತೆ ಎಲ್ಲ ಸಮುದಾಯ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಚುಂಚಶ್ರೀ ಮಾಡುತ್ತಿದ್ದಾರೆ. ರಾಷ್ಟ್ರೀಯ ಧರ್ಮ ಪರಿಷತ್ ಸಲಹೆಗಾರರಾಗಿ ಶ್ರೀಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯಾತಿಗಣ್ಯರು ಪಕ್ಷಾತೀತವಾಗಿ ಶ್ರೀಗಳ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಕೈನ ಒಂದು ಬೆರಳು ಬೇರೆಯವರ ಬಗ್ಗೆ ತಪ್ಪು ಮಾತನಾಡಿದರೆ ಉಳಿದ ನಾಲ್ಕು ತಮ್ಮ ಕಡೆಯೆ ತೋರಿಸುತ್ತದೆ ಎನ್ನುವುದನ್ನು ಶಾಸಕರು ನೆನಪು ಮಾಡಿಕೊಳ್ಳಬೇಕು. ಸಾಧು ಸಂತರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ತಮ್ಮ ಭಾಷಣದಲ್ಲಿ ಮಠ ಸಂಪರ್ಕ ಕಡಿಮೆ ಎಂದಿದ್ದಾರೆ. ಹಾಗಿದ್ದ ಮೇಲೆ ಮಠಗಳ ಸಾಮಾಜಿಕ ಸೇವೆಯ ಬಗ್ಗೆ ಅವರಿಗೆ ಏನು ಮಾಹಿತಿ ಇರುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡುವ ಮುನ್ನ ಯೋಚಿಸಬೇಕು. ಆದರೆ ಶಾಸಕ ವರ್ತನೆ ಅವರಿಗೆ ಮಠದ ಮೇಲಿರುವ ಭಾವನೆಯನ್ನು ತೋರಿಸುತ್ತದೆ. ಚುಂಚನಗಿರಿ ಮಠದ ಹಳಿ ತಪ್ಪಿಲ್ಲ. ಕೆಲ ದಿನದ ಹಿಂದಷ್ಟೇ ರೈತರ ಬಗ್ಗೆ ನಾಲಗೆ ಹರಿಬಿಟಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಯಾವ ಆತಂಕಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಕಾಲಭೈರವೇಶ್ವರಿಗೆ ಅವರಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.