ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ವಾಟಾಳ್ ನಾಗರಾಜ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  
ಮಂಡ್ಯ

ವಾಟಾಳ್ ನಾಗರಾಜ್ ಕ್ಷಮೆಯಾಚನೆಗೆ ಆಗ್ರಹ: ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಬಿಎಸ್‌ವೈ ಅಭಿಮಾನೋತ್ಸವ ಟೀಕಿಸಿದ್ದಕ್ಕೆ ಆಕ್ರೋಶ
  • ವಾಟಾಳ್ ನಾಗರಾಜ್ ಭಾವಚಿತ್ರ ಹರಿದು ಆಕ್ರೋಶ
ಮಂಡ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವವನ್ನು ಅಣಕಿಸುವ ಜತೆಗೆ ಅವಮಾನ ಮಾಡಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ವಾಟಾಳ್ ನಾಗರಾಜ್ ಭಾವಚಿತ್ರ ಹರಿದು ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರ ಜತೆ ಒಡನಾಟ ಹೊಂದಿರುವ ವಾಟಾಳ್ ನಾಗರಾಜ್ ಬಿಜೆಪಿ ಕಾರ್ಯ ಚಟುವಟಿಕೆ ಬಗ್ಗೆ ವಿನಾಕಾರಣ ಅಪಸ್ವರ ಎತ್ತಿ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಐಆರ್ ವಿರೋಧಿಸಿ ಮಮತಾ ಬ್ಯಾನರ್ಜಿ ಪರ ಬ್ಯಾಟಿಂಗ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋಮುವಾದಿ, ಮೂಲಭೂತವಾದಿ ಎಂದು ಟೀಕಿಸಿದ್ದಾರೆ. ಅಲ್ಲದೆ, ಚಿತ್ರದುರ್ಗದಲ್ಲಿ ನಡೆದ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವವನ್ನು ಅಣಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು, ನೂರಾರು ಮಠಾಧೀಶರು ಹಾಗೂ ರಾಜಕೀಯ ನಾಯಕರು ಅಭಿಮಾನೋತ್ಸವದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಆದರೆ, ಬಿ.ಎಸ್.ಯಡಿಯೂರಪ್ಪರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಭಿಮಾನೋತ್ಸವವನ್ನು ಅಣಕಿಸಿರುವುದು ಮಠಾಧೀಶರು ಮತ್ತು ಯಡಿಯೂರಪ್ಪ ಅಭಿಮಾನಿಗಳಿಗೆ ಮಾಡಿದ ಅವಮಾನವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನಡೆಸಿರುವ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. ಬಗರ್ ಹುಕುಂ, ಜೀತ ವಿಮುಕ್ತಿ, ರೈತ ಪರ ಹೋರಾಟ ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಆಗಿದ್ದಾಗ ಅವರು ಜಾರಿಗೊಳಿಸಿದ ಜನಪರ ಯೋಜನೆ ಜತೆಗೆ ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮವಹಿಸಿದ್ದಾರೆ, ಇಂತಹ ಜನಪರ ನಾಯಕನ ಮೇಲೆ ಈಗಲೂ ಜನತೆ ಅಭಿಮಾನ ಇಟ್ಟಿರುವುದಕ್ಕೆ ಅಭಿಮಾನೋತ್ಸವವೇ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಕೋಮುವಾದಿ ಮೂಲಭೂತವಾದಿ ಎಂದು ಟೀಕಿಸುವ ಇವರು ಟಿಪ್ಪು ಸುಲ್ತಾನ್ ಸಮಾಧಿಗೆ ಗೌರವ ಸಲ್ಲಿಸುತ್ತಾರೆ. ನಾಲಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಲಿ, ರಾಜಕಾರಣ ಮಾಡುವುದಾದರೆ ರಾಜಕೀಯ ಮಾಡಲಿ. ಸಿದ್ದರಾಮಯ್ಯ ಪರ ವಕಾಲತ್ತು ವಹಿಸುವ ವಾಟಾಳ್ ಅವರನ್ನ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ನೇಮಿಸಿಕೊಳ್ಳಲಿ. ಯಡಿಯೂರಪ್ಪ ಅವರ ಅಭಿಮಾನೋತ್ಸವವನ್ನು ಅಣಕಿಸಿರುವ ವಾಟಾಳ್ ನಾಗರಾಜ್ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರನ್ನು ಟೀಕೆ ಮಾಡುವ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮಾತನಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಅಭಿಮಾನಿಗಳನ್ನು ಕೆಣಕಬೇಡಿ. ರಾಜ್ಯದ ಜನರ ಕ್ಷಮೆಯಾಚಿಸದೆ ಮಂಡ್ಯ ಜಿಲ್ಲೆಗೆ ಭೇಟಿ ನೀಡುವಿರಾ ಎಂದು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ವಿವೇಕ್, ಶಿವಕುಮಾರ ಆರಾಧ್ಯ, ಕೆ.ಟಿ.ಶಿವಲಿಂಗಯ್ಯ, ಹೊಸಹಳ್ಳಿ ಶಿವು, ಚಂದ್ರು, ಸುನಿಲ್, ರಾಜೀವ್‌ಗೌಡ , ರಮೇಶ್, ಆರಾಧ್ಯ, ಭೀಮೇಶ್, ಕೀಲಾರ ಮಧು, ನಾಗಾನಂದ, ನಿತ್ಯಾನಂದ ಇತರರಿದ್ದರು.