ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯ: ನೀಟ್ ದಿನವೇ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಸುವ ಮೂಲಕ ನಾಲ್ಕೈದು ವಿದ್ಯಾರ್ಥಿಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿ ತಡವಾದ ಪರಿಣಾಮ ಪರೀಕ್ಷೆ ಎದುರಿಸಲಾಗದೆ ಅವರ ಭವಿಷ್ಯವನ್ನೇ ಹಾಳು ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾ.ಸಿ.ಸಿದ್ದರಾಜು ಮಾತನಾಡಿ, ಕಳೆದ ಒಂದು ತಿಂಗಳ ಹಿಂದೆಯೇ ನೀಟ್ ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಅದೇ ದಿನ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಮಾಡುವ ಮೂಲಕ ರಾಜ್ಯದ ವಿವಿಧ ಭಾಗಗಳಿಂದ ವಾಹನಗಳಲ್ಲಿ ಜನರನ್ನು ಕರೆಸಿಕೊಂಡಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಉಂಟಾಗಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ತಡವಾಗಿ ತೆರಳುವಂತಾಗಿದೆ. ಇಂತಹ ಘಟನೆಯಿಂದಾಗಿ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೈತಪ್ಪಿದಂತಾಗಿದೆ. ಇದು ಕಾಂಗ್ರೆಸ್ ಪಕ್ಷ ಆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಬೆಟ್ಟು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಮಾರಂಭಕ್ಕೆ ಅನುಮತಿ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸರ್ಕಾರ ಗ್ರೇಸ್ ಮಾರ್ಕ್ಸ್ ನೀಡಿ ನೇರ ಪ್ರವೇಶ ಕೊಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿವೇಕ್, ನಗರಾಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ನಿತ್ಯಾನಂದ, ಹೊಸಹಳ್ಳಿ ಶಿವು, ಶಿವಕುಮಾರ್ ಕೆಂಪಯ್ಯ, ವೈರಮುಡಿ, ಸುನೀಲ್, ಶಿವಲಿಂಗಯ್ಯ, ಮಾದರಾಜೇ ಅರಸು, ಧರಣೇಂದ್ರ, ಶಶಿಕುಮಾರ್ ಇತರರಿದ್ದರು.