ಮಂಡ್ಯ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಳ್ಳು-ಬೆಲ್ಲವನ್ನು ರವಾನಿಸಿದರು.
- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ರೋಶ
- ಅಂಚೆ ಮೂಲಕ ಎಐಸಿಸಿ ಕಚೇರಿ ರವಾನೆ
ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಳ್ಳು ಬೆಲ್ಲವನ್ನು ಕಳುಹಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪ್ರಧಾನ ಅಂಚೆ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚಿ ಒಳ್ಳೆಯ ಮಾತನಾಡಿ ಎಂಬ ನಾಣ್ಣುಡಿ ಇದೆ. ಅದರಂತೆ ಮಲ್ಲಿಕಾರ್ಜುನ ಖರ್ಗೆ ಅವರು ಎಳ್ಳು-ಬೆಲ್ಲವನ್ನು ತಿಂದು ಒಳ್ಳೆಯ ಮಾತುಗಳನ್ನಾಡಲಿ ಎಂದು ಅಂಚೆ ಮೂಲಕ ಎಐಸಿಸಿ ಕಚೇರಿಗೆ ರವಾನಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಬಸವಣ್ಣನ ನಾಡಿನಿಂದ ಬಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಾಯಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಹೇಳಿರುವುದನ್ನು ತೀವ್ರವಾಗಿ ಖಂಡಿಸಿದರು.
ಹಿಂದೆಯೂ ಸಹ ಖರ್ಗೆ ಅವರು ಮೋದಿ ಅವರನ್ನು ಬಹಳಷ್ಟು ಕೀಳು ಮಟ್ಟದ ಮಾತುಗಳಿಂದ ನಿಂದಿಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ವಿಷ ಸರ್ಪಗಳು, ಅವರು ಬಂದಾಗ ನಮಾಜ್ ಮಾಡುವುದನ್ನು ಬಿಟ್ಟು ಕೊಂದು ಹಾಕಿ ಎಂದು ದ್ವೇಷ ಭಾಷಣ ಮಾಡಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ದಲಿತ ನಾಯಕರು, ಕಾರ್ಯಕರ್ತರು, ನಾಯಕರಿದ್ದಾರೆ. ಅವರೆಲ್ಲರನ್ನೂ ವಿಷ ಸರ್ಪಗಳ ರೀತಿಯಲ್ಲಿ ಒಡೆಯುತ್ತೀರಾ ಎಂದು ಪ್ರಶ್ನಿಸಿದ ಅವರು, ಇದೇನಾ ನೀವು ದಲಿತರಿಗೆ ನೀಡುವ ಗೌರವವೇ?. ಬಸವಣ್ಣ ಹುಟ್ಟಿ ಬೆಳೆದ ನಾಡಿನಿಂದ ಬಂದ ಖರ್ಗೆ ಅವರು, ವಚನದಲ್ಲಿ ಉಲ್ಲೇಖಿಸಿದಂತೆ ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಸ್ಪಟಿಕದ ಸಲಾಖೆಯಂತಿರಬೇಕು ಎಂದಿರುವುದನ್ನು ಮರೆತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲೇ ತಿಳಿಸಿ ಪ್ರಧಾನಿಯಂತಹ ಹುದ್ದೆಯಲ್ಲಿರುವ ನಾಯಕನ ಬಗ್ಗೆ ತುಚ್ಛವಾಗಿ ಉಲ್ಲೇಖಿಸಿ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಅವರನ್ನು ಭಯೋತ್ಪಾದಕ ಎಂದು ಹೇಳುವ ಮೂಲಕ ನಿಮ್ಮ ವಯಸ್ಸಿಗೂ ಅನುಭವಕ್ಕೂ ಗೌರವ ತರುವಂತಹ ವಿಚಾರವಲ್ಲ. ಅಂತೆಯೇ ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದ್ದೀರಿ. ಅಷ್ಟೇ ಏಕೆ ಹಿಂದೂಗಳ ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ವಿರೋಧ ವ್ಯಕ್ತಪಡಿಸುತ್ತೀರಿ. ಎಸ್‌ಐರ್ ಮತ್ತು ಸಿಎಎಯನ್ನೂ ವಿರೋಧಿಸಿದ್ದೀರಿ. ಇಂತಹ ಹಲವಾರು ಕಾಯ್ದೆಗಳನ್ನೂ ವಿರೋಧಿಸುವ ಮೂಲಕ ಹಿಂದೂಗಳಿಗೆ ಅಪಮಾನ ಮಾಡಿದ್ದೀರಿ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಹಂತಪ್ಪ, ಹೊಸಹಳ್ಳಿ ಶಿವು, ಮಾದರಾಜೇ ಅರಸ್, ಭೀಮೇಶ್, ರಾಮೇಗೌಡ, ಶಿವಲಿಂಗಯ್ಯ, ನಾಗರಾಜು ಇತರರಿದ್ದರು.