ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಎಸ್ಪಿ ಸಿ.ಇ.ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.
- ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ತಪ್ಪು ಪ್ರಕಟಣೆ
- ಸಾರ್ವಜನಿಕರ ತೆರಿಗೆ ಹಣ ದುರುಪಯೋಗ
- ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ದೂರು
ಮಂಡ್ಯ: ಕೇಂದ್ರ ಸರ್ಕಾರದ ಯೋಜನೆ ಕುರಿತು ಸುಳ್ಳು ಪ್ರಕಟಣೆ ನೀಡಿದ್ದಾರೆಂದು ಆರೋಪಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆ ಮುಖ್ಯ ಕಾರ್ಯದರ್ಶಿ ವಿರುದ್ಧ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ಜಾಹೀರಾತುಗಳು ರಾಜಕೀಯ ಪ್ರೇರಿತವಾಗಿರಬಾರದು. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವಿಬಿ ಜಿ ರಾಮ್ ಜಿ ಬಗ್ಗೆ ನೀಡಿರುವ ಜಾಹೀರಾತು ರಾಜಕೀಯ ಪಕ್ಷಪಾತದಿಂದ ಕೂಡಿದೆ. ತೆರಿಗೆದಾರರ ಹಣವನ್ನು ಕೇಂದ್ರದ ಕಾಯ್ದೆಯ ವಿರುದ್ಧ ಅಪಪ್ರಚಾರ ಮಾಡಲು ಬಳಸುವುದು ಸಾರ್ವಜನಿಕ ಹಣದ ದುರುಪಯೋಗವಾಗಿದೆ ಎಂದು ದೂರಿದರು.
ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿ ಅವರ ವ್ಯಂಗ್ಯಚಿತ್ರವನ್ನು ಬಳಸಿ ಕೇಂದ್ರದ ಯೋಜನೆಯನ್ನು ಟೀಕಿಸಲಾಗಿದೆ. ಇದು ಗಾಂಧೀಜಿ ಅವರಿಗೆ ಮಾಡಿರುವ ಅಪಮಾನವಾಗಿದೆ. ಜಾಹೀರಾತು ಕೇವಲ ರಾಜಕೀಯ ಟೀಕೆಯಾಗಿದ್ದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಬರಬಹುದು. ಆದರೆ, ಸಾರ್ವಜನಿಕ ಹಣ ಬಳಸಿರುವುದರಿಂದ ಸುಪ್ರೀ ಕೋರ್ಟ್‌ನ 2015ರ ಮಾರ್ಗಸೂಚಿಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಜಾಹೀರಾತುಗಳು ಕೇವಲ ಮಾಹಿತಿಯುಕ್ತವಾಗಿರಬೇಕು. ಯಾವುದೇ ರಾಜಕೀಯ ಪಕ್ಷದ ಹಿತಾಸಕ್ತಿ ಉತ್ತೇಜಿಸಲು ಅಥವಾ ವಿರೋಧಿಸಲು ಪಕ್ಷದ ವಿರುದ್ಧ ನಕಾರಾತ್ಮಕ ಚಿತ್ರಣ ನೀಡಲು ಸಾರ್ವಜನಿಕ ಹಣ ಬಳಸುವಂತಿಲ್ಲ. ರಾಜಕೀಯ ಟೀಕೆಗಳಿಗಾಗಿ ಸರ್ಕಾರಿ ಇಲಾಖೆಯ ಹೆಸರಿನಲ್ಲಿ ಜಾಹೀರಾತು ನೀಡುವುದು ಸಂವಿಧಾನದ 14ನೇ ವಿಧಿ ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಷಯದ ಬಗ್ಗೆ ಟೀಕೆ ಮಾಡಲು ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಅವಕಾಳವಿದೆ. ಆದರೆ, ಸರ್ಕಾರಿ ಯಂತ್ರವನ್ನು ಬಳಸಿ ಜನರ ದಾರಿ ತಪ್ಪಿಸುವಂತಹ, ಸುಳ್ಳು ಮಾಹಿತಿ ನೀಡುವಂತಹ, ಅಪಪ್ರಚಾರ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ವರದರಾಜೇಅರಸ್, ಎಸ್.ಆರ್.ಭೀಮೇಶ್, ಪ್ರಸನ್ನಕುಮಾರ್, ಮಹೇಶ, ಎನ್.ನಾಗರಾಜು, ಎಸ್.ಶಿವಕುಮಾರ್ ಆರಾಧ್ಯ ಇತರರಿದ್ದರು.