ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಕಲ್ಪಿತ ವಿಜಯೋತ್ಸವದ ಮೂಲಕ ಪ್ರತಿಭಟನೆ ನಡೆಸಿದರು.
- ತಮಟೆ ಸದ್ದಿ ಹೆಜ್ಜೆ ಹಾಕಿ ವಿಭಿನ್ನ ಪ್ರತಿಭಟನೆ
- ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವ್ಯಂಗ್ಯ ಚಳವಳಿ
ಮಂಡ್ಯ: ತುಮಕೂರಿನಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ವಿರೋಧಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಕಲ್ಪಿತ ವಿಜಯೋತ್ಸವದ ಮೂಲಕ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರದ ಮಾಸ್ಕ್‌ನ್ನು ಮುಖಕ್ಕೆ ಧರಿಸಿಕೊಂಡು ತಮಟೆ ಬಾರಿಸುತ್ತಾ, ಹೆಜ್ಜೆ ಹಾಕುವ ವಿಭಿನ್ನವಾಗಿ ಪ್ರತಿಭಟಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಹಗರಣಗಳ ಸರಮಾಲೆ, ಆಡಳಿತಾತ್ಮಕ ವೈಫಲ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಸಂಕಟಗಳಿಂದ ಬಳತ್ತಿರುವ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಯಾವ ಸಾಧನೆಗೆ ಸಮಾವೇಶ ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ನಿವೇಶನ ಹಗರಣದಲ್ಲಿ ನಿಯಮ ಉಲ್ಲಂಘಿಸಿ ಸಿಎಂ ಮತ್ತು ಕುಟುಂಬದವರಿಗೆ ನಿವೇಶನಗಳ ಹಂಚಿಕೆ, ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ನಡೆದಿದೆ. ಇದಾವುದನ್ನೂ ಪರಿಗಣಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಿನಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಜರಿದರು.
ಆಡಳಿತಾತ್ಮಕ ವೈಫಲ್ಯಗಳ ಆರೋಪಗಳು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದಾಗ, ಸರ್ಕಾರವು ರೈತರಿಗೆ ಸರಿಯಾದ ಪರಿಹಾರ ವಿತರಿಸಿಲ್ಲ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆ ಸರಿಯಾಗಿ ಇಲ್ಲದೆ ಅನಿಯಮಿತ ವಿದ್ಯುತ್ ಕಡಿತದಿಂದ ರೈತರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ರಾಜ್ಯದ ಸಾಲದ ಹೊರೆ 8 ಲಕ್ಷ ಕೋಟಿ ರೂ ದಾಟಿದೆ. 2025-26 ಬಜೆಟ್‌ನಲ್ಲಿ ಮತ್ತೆ 1.50 ಲಕ್ಷ ಕೋಟಿ ರೂ ಸಾಲ ಎತ್ತುವ ಯೋಜನೆ. ಪ್ರತಿ ಕನ್ನಡಿಗನ ಮೇಲೆ 1 ಲಕ್ಷಕ್ಕೂ ಹೆಚ್ಚು ಸಾಲದ ಹೊರೆ - ಇದಕ್ಕಾ ಈ ಸಂಭ್ರಮವೇ ಎಂದು ಪ್ರಶ್ನಿಸಿದರು.
ಔಷಧ, ವೈದ್ಯರಿಲ್ಲದೆ, ಸ್ಕ್ಯಾನಿಂಗ್ ಸೇವೆ ಇಲ್ಲದೆ ಸರ್ಕಾರಿ ಆಸ್ಪತ್ರೆಗಳನ್ನು ಅಧೋಗತಿಗೆ ತಳ್ಳಿ ಬಡವರ ಪಾಲಿಗೆ ಮರಣ ಶಾಸನ ಬರೆಯಲಾಗುತ್ತಿದೆ. ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಸಾರ್ವಜನಿಕ ತೆರಿಗೆ ಹಣದಲ್ಲಿ 4,000 ಬಸ್ ಓಡಿಸಿ ಸಂಭ್ರಮಿಸುತ್ತಿರುವ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನಗರಾಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ಆನಂದ್, ಗೊರವಾಲೆ ಶಿವಣ್ಣ, ಶಿವಕುಮಾರ್ ಆರಾಧ್ಯ, ನಾಗರಾಜು, ಶಿವಲಿಂಗಯ್ಯ, ಮಾದರಾಜೇ ಅರಸು, ಸಂತೋಷ್ ಇತರರಿದ್ದರು.