ಶಿಡ್ಲಘಟ್ಟ ಪೌರಾಯುಕ್ತೆಯನ್ನು ನಿಂದಿಸಿರುವ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಬಂಧಿಸುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ನಗರಸಭೆ ಪೌರಾಯುಕ್ತೆ ಪಂಪಶ್ರೀ ಅವರಿಗೆ ಮನವಿ ಸಲ್ಲಿಸಿದರು.
- ಶಿಡ್ಲಘಟ್ಟ ಪೌರಾಯುಕ್ತೆಗೆ ನಿಂದನೆ ಪ್ರಕರಣ
- ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಬಂಧಿಸಿ
- ಬಿಜೆಪಿ ಕಾರ್ಯಕರ್ತರ ಆಗ್ರಹ
ಮಂಡ್ಯ: ಶಿಡ್ಲಘಟ್ಟ ಪೌರಾಯುಕ್ತೆ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಪದ ಬಳಕೆ ಮಾಡಿರುವ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.
ನಗರಸಭೆ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು, ಪೌರಾಯುಕ್ತೆ ಪಂಪಶ್ರೀ ಅವರ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ರವಾನಿಸಿದರು. ಶಿಡ್ಲಘಟ್ಟ ಪೌರಾಯುಕ್ತೆ ಅಮೃತ್‌ಗೌಡ ಅವರನ್ನು ಏಕವಚನದಲ್ಲಿ ಮಾತನಾಡಿ, ಹೆಣ್ಣು ಮಗಳೆಂಬುದನ್ನೂ ಗಮನಿಸದೆ ಅಶ್ಲೀಲ ಪದಗಳಿಂದ ನಿಂದಿಸಿ ಮಾತನಾಡಿರುವ ಭ್ರಷ್ಟ ಕಾಂಗ್ರೆಸ್ ಪಕ್ಷದ ಪುಡಾರಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಮಂಡ್ಯ ನಗರಸಭಾ ಆಯುಕ್ತರು ಸಹ ಒಬ್ಬ ಹೆಣ್ಣು ಮಗಳಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಧೈರ್ಯ ಮತ್ತು ಮನಸ್ಥೈರ‌್ಯಗಳನ್ನು ತುಂಬುವ ಕೆಲಸವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜುಗೌಡ, ಮುಖಂಡರಾದ ಎಸ್.ಶಿವಕುಮಾರ್ ಆರಾಧ್ಯ, ಯೋಗೇಶ್ ಸಾತನೂರು, ಬಿ.ಟಿ.ಶಿವಲಿಂಗಯ್ಯ, ನಿತ್ಯಾನಂದ, ಪ್ರಸನ್ನ ಬೋರಪ್ಪ, ಬಿ.ಎನ್.ವೇಣು, ಎಂ.ಎಸ್.ನಂದೀಶ್, ವೈರಮುಡಿ, ಎಂ.ರಾಜೇಂದ್ರ ಕೇಶವ ಇತರರಿದ್ದರು.