ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ವಿರುದ್ಧ ಪಾಂಡವಪುರ ಪಟ್ಟಣದ ಐದು ದೀಪದ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ಪಾಂಡವಪುರ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟ್ಟಿದ್ದ ನಾರಿಶಕ್ತಿ ವಂದನಾ ಮಹಿಳಾ ಮೀಸಲಾತಿ ಬಿಲ್ಲನ್ನು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಸಂಸತ್‌ನಲ್ಲಿ ವಿರೋಧಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್‌ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಐದು ದೀಪದ ವೃತ್ತದಲ್ಲಿ ಸೋಮವಾರ ಮಂಗಳಾ ನವೀನ್‌ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್‌ಕುಮಾರ್ ಮಾತನಾಡಿ, ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತರಲು ಹೊರಟಿದ್ದ ನಾರಿಶಕ್ತಿ ವಂದನಾ ಮಹಿಳಾ ಮೀಸಲಾತಿ ಬಿಲ್ಲನ್ನು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಸಂಸತ್‌ನಲ್ಲಿ ವಿರೋಧಿಸಿ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಮೊದಲಿಂದಲೂ ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪಕ್ಷದವರು ಮಸೂದೆಯನ್ನು ಸೋಲಿಸಿ ಸಂಭ್ರಮಿಸಿದ್ದಾರೆ. ನಾರಿ ಶಕ್ತಿ ಮಸೂದೆಯನ್ನು ಸೋಲಿಸಿ ಅವಮಾನ ಮಾಡಿದ್ದಾರೆ. ಇದು ಮಸೂದೆಯ ಸೋಲಲ್ಲ. ಇದು ದೇಶದ ಮಹಿಳೆಯರ ಸೋಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್ ಮಾತನಾಡಿ, ದೇಶದ ಮಹಿಳೆಯರ ಮೀಸಲಾತಿಯನ್ನು ಕೊಡಬೇಕು ಎಂಬ ದಶಕಗಳ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸಂಸತ್‌ನಲ್ಲಿ ಮಹಿಳಾ ಬಿಲ್ಲನ್ನು ಮಂಡಿಸಿದಾಗ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ರಾಜಕೀಯ ದೊಂಬರಾಟಕ್ಕೆ ಬಿಲ್‌ಅನ್ನು ವಿರೋಧಿಸುವ ಮೂಲಕ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ದೇಶದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ನಗರ ಘಟಕದ ಅಧ್ಯಕ್ಷ ಸೋಮಶೇಖರ್, ಮೇಲುಕೋಟೆ ಮಂಡಲ ಅಧ್ಯಕ್ಷ ಎಸ್.ಎನ್.ಟಿ.ಸೋಮಶೇಖರ್, ಪುರಸಭೆ ಮಾಜಿ ಸದಸ್ಯ ಅಶೋಕ್, ರಾಮು, ರಾಮಚಂದ್ರು, ಚನ್ನೇಗೌಡ, ಚಲುವರಾಜು, ನಿರ್ಮಲಾ ಆನಂದ, ಶೋಭಾ ಪಿ.ಗೌಡ, ಪುರುಷೊತ್ತಮ್, ಮಹದೇವಸ್ವಾಮಿ, ಸಿ.ಕೆ.ರಮೇಶ್, ಮಂಜಾಚಾರಿ ಸೇರಿದಂತೆ ಹಲವರು ಇದ್ದರು.