ಮಂಡ್ಯ ನಗರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
- ಮಾನವ ಸರಪಳಿ ನಿರ್ಮಾಣ
- ಬೆಂ-ಮೈ ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಮಂಡ್ಯ: ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆ ಸಮಯದಲ್ಲಿ ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾನವ ಸರಪಳಿ ನಿರ್ಮಿಸಿದ ಪರಿಣಾಮ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವಂತಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಹತ್ತಾರು ಬಾರಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಅಂದು ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡಿದ್ದರಾ?. ದೇಶದ್ರೋಹಿ ಕಾಕ್ರೋಚ್ ಪಾರ್ಟಿ ಪ್ರತಿಭಟನೆ ಮಾಡುತ್ತಿದೆ. ಅದು ಅಮೆರಿಕದಲ್ಲಿ ಹುಟ್ಟಿದ ಪಾರ್ಟಿ. ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಪಕ್ಷ ದೇಶವನ್ನು ಮತ್ತು ಯುವಜನರನ್ನು ಹಾಳು ಮಾಡಲು ಮುಂದಾಗಿದೆ. ಸಮಾಜದಲ್ಲಿ ಇಲ್ಲದ ಗೊಂದಲ ಸೃಷ್ಠಿಸಲು ಹುನ್ನಾರ ನಡೆಸುತ್ತಿರುವ ಕಾಂಗ್ರೆಸ್‌ನ ಪಿತೂರಿಯನ್ನು ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅತ್ಯಂತ ಮುಕ್ತವಾಗಿ ಚರ್ಚೆ ಮಾಡಲು ಬನ್ನಿ ಎಂದು ಕರೆಯುತ್ತಿದ್ದಾರೆ. ಸಂಸತ್ತಿನಲ್ಲೂ ಚರ್ಚೆ ಮಾಡಿ ಎನ್ನುತ್ತಿದ್ದಾರೆ. ಕಾಂಗ್ರೆಸ್ಸಿಗರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಯುವಜನರನ್ನು ಎತ್ತಿಕಟ್ಟಿ ನಮ್ಮ ನಾಯಕರ ವರ್ಚಸ್ಸು ಹಾಳು ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಶಾಸಕ ಹರೀಶ್ ಅವರಿಗೆ ನಡು ರಸ್ತೆಯಲ್ಲೇ ಕಾಂಗ್ರೆಸ್ ಪಕ್ಷದವರು ಮೊಟ್ಟೆ ಎಸೆದು ಹಲ್ಲೆ ಮಾಡಿಸಿದ್ದಾರೆ. ಹರಿಪ್ರಸಾದ್ ಅವರು ವಿಧಾನ ಸೌಧದಲ್ಲೇ ರಾಜ್ಯಪಾಲರ ಮೇಲೆ ಹಲ್ಲೆ ಮಾಡಿದರು. ಬಾಂಗ್ಲಾ ಮಾದರಿ ಹಲ್ಲೆ ಮಾಡುತ್ತೇವೆ ಎಂದು ಐವನ್ ಡಿಸೋಜಾ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ ಮಾತನಾಡಿ, ದೇಶದ್ರೋಹಿ, ದೇಶ ವಿರೋಧಿ ಶಕ್ತಿಗಳನ್ನು ಇಟ್ಟುಕೊಂಡು ಕಾಂಗ್ರೆಸ್ ದೆಹಲಿಯ ಜಂತರ್ ಮಂತರ್‌ನಲ್ಲಿ ಹೈಡ್ರಾಮ ಮಾಡುತ್ತಿರುವುದು ದೇಶದ ಜನರಿಗೆ ತಿಳಿದಿದೆ. ಕಾಂಗ್ರೆಸ್‌ನವರು ಮುಖವಾಡ ಇಲ್ಲದೇ ರಾಜಕೀಯ ಹೋರಾಟ ಮಾಡುತ್ತಿದ್ದಾರೆ ಎಂದು ಛೇಡಿಸಿದರು.
ಪ್ರತಿಭಟನೆಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಮಾಜಿ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ವಿದ್ಯಾ ನಾಗೇಂದ್ರ, ಸಿದ್ದರಾಜುಗೌಡ, ಶಿವಕುಮಾರ್ ಆರಾಧ್ಯ, ಮಹಂತಪ್ಪ, ಶ್ರೀಧರ್, ನಾಗಾನಂದ್, ಚಂದ್ರು, ಕೆರಗೋಡು ಮಹೇಶ್, ಆನಂದ, ಜವರೇಗೌಡ, ಭೀಮೇಶ, ಶಿವಣ್ಣ ಇತರರಿದ್ದರು.
ದೇಶ ಹಾಳಾದರೂ ಕಾಂಗ್ರೆಸ್ ಚೆನ್ನಾಗಿರಬೇಕು
ಶ್ರೀರಂಗಪಟ್ಟಣ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಕಾಂಗ್ರೆಸ್‌ನವರಿಗೆ ದೇಶ ಹಾಳಾದರೂ ಸರಿ. ಅವರು ಮಾತ್ರ ಚೆನ್ನಾಗಿರಬೇಕು ಎಂಬ ಭಾವನೆ ಇದೆ. ಬಿಜೆಪಿ ಶಾಸಕರ ಮೇಲೆ ನಡೆದಿರುವ ಹಲ್ಲೆ ಬಗ್ಗೆ ತನಿಖೆಯಾಗಬೇಕು. ಹಲ್ಲೆ ಮಾಡಿದವರನ್ನು ಬಂಧಿಸಿದ್ದೇವೆ ಎನ್ನುತ್ತಾರೆ. ಆದರೆ ಅವರನ್ನು ಎಲ್ಲಿಟ್ಟಿದ್ದಾರೆ ಎಂಬುದೇ ತಿಳಿಸಿಲ್ಲ. 20 ದಿನದಿಂದ ಕಾಕ್ರೋಚ್ ಪಾರ್ಟಿ ಶಾಂತಿಯುತ ಪ್ರತಿಭಟನೆ ಮಾಡುತ್ತಿತ್ತು. ವಿದೇಶದಿಂದ ವಾಪಸ್ ಬಂದ ರಾಹುಲ್‌ಗಾಂಧಿ ಅವರೊಂದಿಗೆ ಸೇರಿಕೊಂಡು ಪ್ರತಿಭಟನೆ ನೆಪದಲ್ಲಿ ಹೈಡ್ರಾಮ ಶುರು ಮಾಡಿಕೊಂಡರು. ಗೂಂಡಾಗಳನ್ನು ಬಿಟ್ಟು ಪೊಲೀಸರ ಮೇಲೆ ಹಲ್ಲೆ ಮಾಡಿಸಿದರು ಎಂದು ದೂರಿದರು.
ದೇಶದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ಕಾರಣದಿಂದಾಗಿ ಪಕ್ಷ ಉಳಿಸಿಕೊಳ್ಳಲು ಪರದಾಟುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊರ ರಾಷ್ಟ್ರದಿಂದ ಯುವಕರನ್ನು ಕರೆದುಕೊಂಡು ಬಂದು ವಿದ್ಯಾರ್ಥಿಗಳ ಸೋಗಿನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರಧಾನಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿಸುವ ಮೂಲಕ ಅರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮವೆಂದು ಕೇಂದ್ರ ಸರ್ಕಾರ ಹೇಳಿದೆ. ಜತೆಗೆ ಪ್ರಕರಣ ತ್ವರಿತ ವಿಚಾರಣೆ ಹಾಗೂ ದೋಷಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ತ್ವರಿತ ನ್ಯಾಯಾಲಯ ಸ್ಥಾಪಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೂ ಕಾಂಗ್ರೆಸ್ ನೀಟ್ ಪರೀಕ್ಷೆ ಹೆಸರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ನಿರ್ವಹಣೆ ಮಾಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಯ ಅನುದಾನ ಇನ್ನೂ ಸಮರ್ಪಕವಾಗಿ ಬರುತ್ತಿಲ್ಲ. ಇಲ್ಲದ ನಿಯಮ ಹಾಕಿ ಗ್ಯಾರಂಟಿ ಯೋಜನೆಯಿಂದ ಫಲಾನುಭವಿಗಳ ಹೆಸರು ಕೈಬಿಡುವ ಕೆಲಸ ಮಾಡುತ್ತಿದೆ. ಶೈಕ್ಷಣಿಕ ಚಟುವಟಿಕೆ ಆರಂಭವಾದರೂ ಶಿಕ್ಷಣ ಸಚಿವರನ್ನು ನೇಮಿಸಿಲ್ಲ. ಕೃಷಿ ಚಟುವಟಿಕೆ ಸ್ಥಗಿತಗೊಂಡರೂ ರೈತರ ಕಷ್ಟ ಕೇಳುವವರಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಈಗಾಗಲೇ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಚರ್ಚಿಸಲು ಸರ್ವ ಪಕ್ಷದ ಸಭೆ ಮಾಡದ ಕಾಂಗ್ರೆಸ್ ಸರ್ಕಾರ, ಸಚಿವ ಸಂಪುಟದ ಸರ್ಕಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.