ಮಳವಳ್ಳಿ: ರಾಷ್ಟ್ರಗೀತೆ ವಂದೇ ಮಾತರಂ ಅನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿ ಹಾಡುವಂತೆ ಆದೇಶ ಹೊರಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ತೀರ್ಮಾನ ಖಂಡಿಸಿ ಮಳವಳ್ಳಿ ತಾಲೂಕು ಬಿಜೆಪಿ ಮತ್ತು ಜೆಡಿಎಸ್ ಘಟಕದ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ಬಂದು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ವಂದೇ ಮಾತರಂ ಈ ದೇಶದ ಉಸಿರು, ಸ್ವಾತಂತ್ರ್ಯ ಹೋರಾಟಗಾರರ ಮಂತ್ರ. ಅಂತಹ ಪವಿತ್ರ ಗೀತೆಯನ್ನು ಮೊಟಕುಗೊಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದು ದೇಶಭಕ್ತರಿಗೆ ಮಾಡಿದ ಅಪಮಾನ ಎಂದ ಅವರು, ಒಂದು ವರ್ಗದ ಓಲೈಕೆಗಾಗಿ ರಾಷ್ಟ್ರೀಯ ಭಾವನೆ ಬಲಿಕೊಡುವ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ರಾಜ್ಯ ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆದು ಪೂರ್ಣ 6 ಚರಣ ಹಾಡುವಂತೆ ಮರು ಆದೇಶಿಸಬೇಕು. ಇಲ್ಲದಿದ್ದರೆ ತಾಲೂಕಿನಾದ್ಯಂತ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಧುಗಂಗಾಧರ್ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ರಾಷ್ಟ್ರೀಯತೆ ಬಗ್ಗೆ ಗೌರವವೇ ಇಲ್ಲ. ವಂದೇ ಮಾತರಂ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರ ಖಂಡನೀಯ. ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಬುದ್ಧಿ ಹೇಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತು ಮಾತನಾಡಿ, ಬಿಜೆಪಿ-ಜೆಡಿಎಸ್ ಮೈತ್ರಿ ರಾಷ್ಟ್ರೀಯ ವಿಚಾರಗಳಲ್ಲಿ ಒಂದಾಗಿದೆ. ಸರ್ಕಾರದ ಈ ದೇಶ ವಿರೋಧಿ ನಡೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಎಸ್.ಸಿದ್ದರಾಜು, ಮುಖಂಡರಾದ ಎಚ್.ಆರ್.ಅಶೋಕ್ ಕುಮಾರ್, ಹೆಬ್ಬಣಿ ಬಸವರಾಜು, ಕ್ಯಾತನಹಳ್ಳಿ ಅಶೋಕ್, ಕೆ.ಸಿ.ನಾಗೇಗೌಡ, ಶಿವಲಿಂಗಸ್ವಾಮಿ, ನಂದಿಪುರ ಕುಮಾರ್ ಇತರರು ಇದ್ದರು.