ಶ್ರೀರಂಗಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಆಶ್ರಮದ ಕ್ಷೇತ್ರಾಧಿಪತಿ ಶ್ರೀ ಕಾಶಿಚಂದ್ರಮೌಳೇಶ್ವರ ಸ್ವಾಮಿಗೆ ಪೀಠಾಧಿಪತಿ ಶ್ರೀ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರು ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ ಮತ್ತು ಅಹೋರಾತ್ರಿ ಮೂರು ಯಾಮ ಪೂಜೆ ನೆರವೇರಿಸಿದರು. 
ಮಂಡ್ಯ

ಶ್ರೀ ಕಾಶಿಚಂದ್ರಮೌಳೇಶ್ವರ ಸ್ವಾಮಿಗೆ ಬಿಲ್ವಾರ್ಚನೆ

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಆಶ್ರಮದ ಕ್ಷೇತ್ರಾಧಿಪತಿ ಶ್ರೀ ಕಾಶಿಚಂದ್ರಮೌಳೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ ಮತ್ತು ಅಹೋರಾತ್ರಿ ಮೂರು ಯಾಮ ಪೂಜೆ ನೆರವೇರಿಸಿ ಆರಾಧಿಸಲಾಯಿತು.
ಮಹಾಶಿವರಾತ್ರಿಯ ಸಂದರ್ಭ ವರ್ಷಕ್ಕೊಮ್ಮೆ ವಿಶೇಷವಾಗಿ ಗರ್ಭಗುಡಿಯಲ್ಲಿನ ಶಿವಲಿಂಗವನ್ನು ಸ್ಪರ್ಶಿಸುವ ಅವಕಾಶವನ್ನು ದಕ್ಷಿಣ ಕರ್ನಾಟಕ ಭಾಗದಲ್ಲಿ ಭಕ್ತಾದಿಗಳಿಗೆ ಕಲ್ಪಿಸಿರುವ ಆಶ್ರಮವಾಗಿರುವುದು ವಿಶೇಷವಾಗಿದ್ದು, ಈ ವೇಳೆ ಪೀಠಾಧಿಪತಿ ಶ್ರೀಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಉಪವಾಸವಿದ್ದು ಸ್ವಾಮಿಗೆ ಅಭಿಷೇಕ ಅರ್ಪಿಸಿ ಬಳಿಕ ಬಹಿರಂಗ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.
ಆಶ್ರಮದ ವತಿಯಿಂದ ವಿಶೇಷವಾಗಿ ಬಂದಂತಹ ಸಮಸ್ತ ಭಕ್ತರಿಗೆ ಗರ್ಭಗುಡಿಯೊಳಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದು, ಸ್ವತಃ ಭಕ್ತರೇ ಲಿಂಗಸ್ಪರ್ಶ ಮಾಡಿ ಅಭಿಷೇಕ ಹಾಗೂ ಪೂಜೆಯನ್ನು ಸಲ್ಲಿಸಿದರು. ಆಶ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಉಪ್ಪಿಟ್ಟು, ತಂಬಿಟ್ಟು ಮತ್ತು ಪಾನಕವನ್ನು ವಿತರಿಸಿ ಜಾಗರಣೆಯ ವ್ಯವಸ್ಥೆಯೂ ಕೂಡ ಆಶ್ರಮದ ವತಿಯಿಂದ ಏರ್ಪಡಿಸಲಾಗಿತ್ತು. ಈ ವೇಳೆ ಭರತನಾಟ್ಯ, ಸಂಗೀತ ಕಾರ್ಯಕ್ರಮಗಳು ಸಹ ಜರುಗಿದವು.